ಜಪಾನ್​ನಲ್ಲಿ 'ಕೆಜಿಎಫ್​ 2' ದಾಖಲೆಯನ್ನು ಮುರಿಯುತ್ತದೆಯೇ 'ಆರ್​ಆರ್​ಆರ್​'?

RRR
Published on

ಮುಂಬೈ: ಎಸ್​.ಎಸ್. ರಾಜಮೌಳಿ ನಿರ್ದೇಶನದ ಮತ್ತು ಜ್ಯೂನಿಯರ್​ ಎನ್​ಟಿಆರ್​ ಹಾಗೂ ರಾಮ್​ಚರಣ್​ ತೇಜ ಅಭಿನಯದ 'ಆರ್​ಆರ್​ಆರ್​' ಚಿತ್ರವು ಜಪಾನ್​ನಲ್ಲಿ ಕಳೆದ ವಾರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯಾದ ಏಳು ದಿನಗಳಲ್ಲಿ ಚಿತ್ರವು 4,95,000 ಡಾಲರ್​ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.

'ಆರ್​ಆರ್​ಆರ್​' ಚಿತ್ರವು ಮಾರ್ಚ್​​ನಲ್ಲಿ ಬಿಡುಗಡೆಯಾಗಿತ್ತು. ಚಿತ್ರವು ಸಾವಿರ ಕೋಟಿ ರೂ. ಕಲೆಕ್ಷನ್​ ಕಂಡಿತ್ತು. ಆ ನಂತರ ಟಿವಿ, ಓಟಿಟಿ ಎಲ್ಲೆಡೆ ಪ್ರಸಾರವಾಗಿತ್ತು. ಚಿತ್ರವು ಜಗತ್ತಿನ ಹಲವು ದೇಶಗಳಲ್ಲಿ ಬಿಡುಗಡೆಯಾಗಿದ್ದರೂ, ಜಪಾನ್​ನಲ್ಲಿ ಮಾತ್ರ ಬಿಡುಗಡೆಯಾಗಿರಲಿಲ್ಲ. ಕಳೆದ ವಾರವಷ್ಟೇ ಚಿತ್ರವು ಜಪಾನ್​ನಲ್ಲಿ ಬಿಡುಗಡೆಯಾಗಿದ್ದು, ಚಿತ್ರತಂಡದವರು ಚಿತ್ರದ ಪ್ರಚಾರ ಮಾಡುವುದಕ್ಕೆ ಜಪಾನ್​ಗೆ ತೆರಳಿದ್ದರು. ಅದ್ಭುತ ಓಪನಿಂಗ್ ಪಡೆದ ಚಿತ್ರವು ಒಂದು ವಾರದಲ್ಲಿ 5 ಕೋಟಿ ರೂ. ಸಂಗ್ರಹಿಸಿದೆ ಎಂಬ ಸುದ್ದಿ ಇದೆ.

ಚಿತ್ರವನ್ನು ಒಟ್ಟು 209 ಚಿತ್ರಮಂದಿರಗಳು ಮತ್ತು 31 ಐಮ್ಯಾಕ್ಸ್​ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ. ಈ ವರ್ಷ ಬಿಡುಗಡೆಯಾಗಿ ಹೆಚ್ಚು ಗಳಿಕೆ ಮಾಡುತ್ತಿರುವ ಎರಡನೇ ಚಿತ್ರ 'ಆರ್​ಆರ್​ಆರ್​' ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಯಶ್​ ಅಭಿನಯದ 'ಕೆಜಿಎಫ್​ 2' ಚಿತ್ರವು ಜಪಾನ್​ನಲ್ಲಿ ಬಿಡುಗಡೆಯಾಗಿ ಒಳ್ಳೆಯ ಗಳಿಕೆ ಕಂಡಿತ್ತು. ಈಗ ಆ ದಾಖಲೆಯನ್ನು 'ಆರ್​ಆರ್​ಆರ್​' ಮುರಿಯುತ್ತದಾ? ಎಂಬುದನ್ನು ಇನ್ನಷ್ಟೇ ನೋಡಬೇಕಿದೆ.

ಇದಕ್ಕೂ ಮೊದಲು ಜಪಾನ್​ನಲ್ಲಿ 'ಮುತ್ತು', 'ಬಾಹುಬಲಿ 1', 'ಬಾಹುಬಲಿ 2', '3 ಈಡಿಯಟ್ಸ್' ಮುಂತಾದ ಚಿತ್ರಗಳು ಬಿಡಗುಡೆಯಾಗಿದ್ದು, ಈ ಪೈಕಿ ಅತೀ ಹೆಚ್ಚು ಗಳಿಕೆ ಮಾಡಿರುವ ಚಿತ್ರ, ರಜನಿಕಾಂತ್​ ಅಭಿನಯದ 'ಮುತ್ತು' ಆಗಿರುವುದು ವಿಶೇಷ.

ರಾಜಮೌಳಿ ನಿರ್ದೇಶನದ 'ಅರ್​ಆರ್​ಅರ್​' ಚಿತ್ರವು ಮೊದಲ ದಿನವೇ 223 ಕೋಟಿ ರೂ.ಗಳ ಕಲೆಕ್ಷನ್​ ದಾಖಲಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಿತ್ತು. ಈ ಚಿತ್ರವನ್ನು ವಿ.ವಿ. ದಾನಯ್ಯ ನಿರ್ಮಿಸಿದ್ದು, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net