

ದತ್ತಣ್ಣ ಅಭಿನಯದ ‘ಕೆಂಪಿರ್ವೆ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ವೆಂಕಟ್ ಭಾರದ್ವಾಜ್, ಇದೀಗ ಸದ್ದಿಲ್ಲದೆ ‘ದಿ ಪೈಂಟರ್’ ಎಂಬ ಇನ್ನೊಂದು ಚಿತ್ರ ಮುಗಿಸಿದ್ದಾರೆ. ಇದಕ್ಕೂ ಮುನ್ನ ಅವರ ‘ಆಮ್ಲೆಟ್’ ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಅದನ್ನು ಬಿಡುಗಡೆ ಮಾಡುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಈ ಲಾಕ್‌ಡೌನ್ ಸಂದರ್ಭದಲ್ಲಿ ಕೂತು ಏನು ಮಾಡಬೇಕು ಎನ್ನುವಷ್ಟರಲ್ಲಿ ಒಂದು ಐಡಿಯಾ ಹೊಳೆದಿದೆ. ಅದನ್ನಿಟ್ಟುಕೊಂಡು ಅವರು ಒಂದು ಕಥೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಕಥೆಗೆ ‘ದಿ ಪೈಂಟರ್’ ಎಂಬ ಹೆಸರಿಟ್ಟು, ಚಿತ್ರೀಕರಣವನ್ನೂ ಮಾಡಿ ಮುಗಿಸಿದ್ದಾರೆ.
ಇದನ್ನೂ ಓದಿ: ಮೇ 11ರಿಂದ ಧಾರಾವಾಹಿ ಶೂಟಿಂಗ್ ಪ್ರಾರಂಭ?
‘ದಿ ಪೈಂಟರ್’, ಲಾಕ್‌ಡೌನ್ ಪರಿಸ್ಥಿತಿಗೆ ತಕ್ಕಂತೆ ಒಂದು ಚಾಲೆಂಜಿಂಗ್ ಕಥೆಯಂತೆ. ಈ ಸಂದರ್ಭವನ್ನು ಕೆಲವರು ಹೇಗೆ ಒಳ್ಳೆಯದಕ್ಕೆ ಬಳಸುತ್ತಾರೆ ಮತ್ತು ಕೆಲವರು ಕೆಟ್ಟದಕ್ಕೆ ಬಳಸಿಕೊಳ್ಳುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, 90 ನಿಮಿಷದ ಅವಧಿಯದ್ದಾಗಿರುತ್ತದಂತೆ.
ಇದನ್ನೂ ಓದಿ: ಕಿರುತೆರೆ ಕಂಗಾಲು, ಮುಂದೇನು ಎಂಬುದೇ ಯಕ್ಷಪ್ರಶ್ನೆ
ಈಗಾಗಲೇ ಅವರು ಏಪ್ರಿಲ್ ಎರಡನೇ ವಾರದಿಂದ 10 ದಿನಗಳ ಕಾಲ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಐವರು ಛಾಯಾಗ್ರಾಹಕರು, 17 ಕಲಾವಿದರು ಮತ್ತು ತಂತ್ರಜ್ಞರನ್ನಿಟ್ಟುಕೊಂಡು, ಬೆಂಗಳೂರು, ಕನಕಪುರ, ಹೆಬ್ಬಾಳ ಮತ್ತು ತುಮಕೂರಿನಲ್ಲಿ ಎಲ್ಲರೂ ತಾವು ಇರುವ ಜಾಗಗಳಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಿ ಮುಗಿಸಿದ್ದಾರಂತೆ. ಇನ್ನು ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ವಿಭಾಗಗಳಿಗೆ ಮಾತ್ರ ಸೀಮಿತವಾಗದೆ ಎಲ್ಲಾ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕೈಗೆ ಸಿಗುವ ಸೀಮಿತ ಪರಿಕರಗಳನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಲ್ಲೇ ಮುಗೀತು ಸಖತ್ ಸಂಗೀತ
ಇದೊಂದು ಅದ್ಭುತವಾದ ಸವಾಲು ಎನ್ನುವ ವೆಂಕಟ್, ಸದ್ಯಕ್ಕೆ ಚಿತ್ರೀಕರಣ ಮುಗಿಸಿ ಸಂಕಲನಕ್ಕೆ ಕಳಿಸಿದ್ದಾರೆ. ಚಂದನ್ ಎಡಿಟಿಂಗ್ ಮಾಡುತ್ತಿದ್ದು, ಜೂನ್ ಮೊದಲ ವಾರದಲ್ಲಿ ಚಿತ್ರ ಸಂಪೂರ್ಣ ತಯಾರಾಗಲಿದೆ ಎನ್ನುತ್ತಾರೆ ಅವರು. ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜತೆಗೆ, ಅವರು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ರಾಜ್ ಕಮಲ್, ನವೀನ್ ಪ್ರಸಾದ್, ಕಬೀರ್ ಸೋಮಯಾಜಿ, ಶಮೀಕ್, ಉಮಾ, ಶಮಾ, ವೈಷ್ಣವಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.