More

    ಕಿರುತೆರೆ ಕಂಗಾಲು, ಮುಂದೇನು ಎಂಬುದೇ ಯಕ್ಷಪ್ರಶ್ನೆ

    ಬೆಂಗಳೂರು: ಲಾಕ್​ಡೌನ್ ಮತ್ತೆ ಮುಂದುವರೆದಿದೆ. ಈ ಮುಂದುವರಿಕೆಯಿಂದ ಹೆಚ್ಚು ಕಂಗಾಲಾಗಿರುವುದು ಕಿರುತೆರೆ ಮಂದಿ. ಏಕೆಂದರೆ, ಇದರಿಂದಾಗಿ ನಷ್ಟ ಅನುಭವಿಸುವುದು ಹಿರಿತೆರೆಗಿಂತ ಕಿರುತೆರೆಯವರೇ ಹೆಚ್ಚು. ಆಶ್ಚರ್ಯವಾಗಬಹುದು. ಆದರೂ ಇದು ನಿಜ.

    ಇದಕ್ಕೂ ಮುನ್ನ ಬೇರೆ ಬೇರೆ ಚಾನಲ್​ಗಳಲ್ಲಿ ಹಲವು ಕನ್ನಡ ಧಾರಾವಾಹಿಗಳು ಪ್ರತಿನಿತ್ಯ ಪ್ರಸಾರವಾಗುತ್ತಿದ್ದವು. ಈ ಪೈಕಿ ಕೆಲವು ಧಾರಾವಾಹಿಗಳು ಟಿ.ಆರ್.ಪಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದವು. ಆದರೆ, ಇದೀಗ ಲಾಕ್​ಡೌನ್​ನಿಂದಾಗಿ, ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಯಾವುದೇ ಧಾರಾವಾಹಿಗಳ ಹೊಸ ಕಂತುಗಳು ಪ್ರಸಾರವಾಗಿಲ್ಲ. ಮುಂದೆ ಲಾಕ್​ಡೌನ್ ಮುಗಿದು, ಧಾರಾವಾಹಿಗಳ ಪ್ರಸಾರಕ್ಕೆ ಮತ್ತೆ ಚಾಲನೆ ಸಿಕ್ಕರೆ, ಬಿಟ್ಟು ಹೋಗಿರುವ ಪ್ರೇಕ್ಷಕರನ್ನು ಮತ್ತೆ ಕರೆತಂದು ಟಿವಿ ಮುಂದೆ ಕೂರಿಸುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ, ಈಗಾಗಲೇ ಹಳೆಯದನ್ನೆಲ್ಲಾ ಜನ ಮರೆತು ಹೋಗಿರುತ್ತಾರೆ. ಅಲ್ಲಿಯವರೆಗೂ ಪ್ರಸಾರವಾದ ಕಂತುಗಳನ್ನು ಮೊದಲು ಸಂಕ್ಷಿಪ್ತವಾಗಿ ತೋರಿಸಬೇಕು. ಅದಕ್ಕೆ ಒಂದಿಷ್ಟು ದಿನಗಳ ಕಾಲ ಮೀಸಲಿಡಬೇಕು. ಕಥೆಯನ್ನು ಮೆಲುಕು ಹಾಕಿದ ನಂತರವಷ್ಟೇ ಹೊಸ ಕಂತುಗಳ ಪ್ರಸಾರ ಮಾಡಬೇಕು. ಜನ ಆ ಕಥೆಗೆ ಹೊಂದಿಕೊಂಡು, ಮತ್ತೆ ಎಂದಿನಂತೆ ನೋಡುವುದಕ್ಕೆ ಪ್ರಾರಂಭಿಸಿದ ಮೇಲೆಯೇ ಗೆಲುವು-ಸೋಲಿನ ಲೆಕ್ಕಾಚಾರ.

    ಈಗ ಕಿರುತೆರೆ ಮಂದಿ ತಲೆ ಕೆಡಿಸಿಕೊಂಡಿರುವುದೇ ಆ ವಿಚಾರಕ್ಕಾಗಿ. ಪ್ರಮುಖವಾಗಿ ಲಾಕ್​ಡೌನ್ ಮುಗಿದ ನಂತರ, ಧಾರಾವಾಹಿಯನ್ನು ಹೇಗೆ ಮತ್ತು ಎಲ್ಲಿಂದ ಪ್ರಸಾರ ಮಾಡಬೇಕು ಎಂದು ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ, ಎಲ್ಲಾ ಧಾರಾವಾಹಿಗಳ ಕಥೆ ಒಂದು ವೇಗದಲ್ಲಿ ಹೋಗುತಿತ್ತು. ಆದರೆ, ಲಾಕ್​ಡೌನ್ ಮುಗಿದ ಮೇಲೂ ಅದೇ ವೇಗ ಮುಂದುವರೆಯುತ್ತದೆ ಮತ್ತು ಜನ ಇಷ್ಟಪಟ್ಟು ನೋಡುತ್ತಾರೆ ಎಂದು ಯಾರಿಗೂ ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ.

    ಇದನ್ನೂ ಓದಿ: ರಿಷಿ ಕಪೂರ್​ಗೆ ನಮನ ಸಲ್ಲಿಸಿದ ನೀತೂ ಮತ್ತು ರಣಬೀರ್​ ಕಪೂರ್​

    ಈ ಕುರಿತು ಮಾತನಾಡುವ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್, ‘ಮುಂದೇನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನಮ್ಮ ಧಾರಾವಾಹಿ ಪೀಕ್​ನಲ್ಲಿತ್ತು. ಜನ ಬಹಳ ಇಷ್ಟಪಟ್ಟಿದ್ದರು. ಮುಂದೆ ಸಹ ಅದೇ ರೀತಿ ಮುಂದುವರೆಯೋಕೆ ಸಾಧ್ಯವಾ ಎಂಬುದು ಗೊತ್ತಿಲ್ಲ. ಜನರನ್ನು ಮತ್ತೆ ಟಿವಿ ಮುಂದೆ ಕೂರಿಸಬೇಕು ಎಂದರೆ, ಈಗ ನಾವು ಸೊನ್ನೆಯಿಂದ ಶುರು ಮಾಡಬೇಕಿದೆ. ಕಥೆ ಎಲ್ಲಿಂದ ನಿಂತಿದೆಯೋ, ಅಲ್ಲಿಂದಲೇ ಮುಂದುವರೆಯುತ್ತಾದರೂ, ಒಟ್ಟಾರೆ ಹೊಸ ಧಾರಾವಾಹಿಯಂತೆ ಬಿಂಬಿಸಬೇಕಿದೆ. ಕಥೆ ಮುಂದುವರೆಯುತ್ತಿದ್ದಂತೆ, ಜನರ ನಾಡಿಮಿಡಿತ ನೋಡಿಕೊಂಡು, ಆ ನಂತರ ಮುಂದುವರೆಯಬೇಕಿದೆ’ ಎನ್ನುತ್ತಾರೆ.

    ಜನರನ್ನು ಕರೆತಂದು ಟಿವಿ ಮುಂದೆ ಕೂರಿಸುವುದು ಒಂದು ದೊಡ್ಡ ಸವಾಲಾದರೆ, ಇನ್ನೊಂದು ಚಿತ್ರೀಕರಣಕ್ಕೆ ಸಂಬಂಧಿಸಿದ್ದು. ಪ್ರಮುಖವಾಗಿ, ಚದುರಿಹೋಗಿರುವ ತಂಡವನ್ನು ಒಂದೆಡೆ ಸೇರಿಸಬೇಕಿದೆ. ಸೇರಿಸುವುದಷ್ಟೇ ಅಲ್ಲ, ಮುಂದಿನ ಕೆಲವು ದಿನಗಳ ಕಾಲ ಚಿತ್ರೀಕರಣಕ್ಕೆ ಸ್ಥಳಾವಕಾಶ ಸಿಗುವುದು ಸಹ ಕಷ್ಟವೇ. ಇನ್ನು ಅಷ್ಟೊಂದು ಜನರ ತಂಡವನ್ನಿಟ್ಟುಕೊಂಡು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಚಿತ್ರೀಕರಣ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕೆಲವೇ ದಿನಗಳ ಹಿಂದೆ ಯಶಸ್ಸು ಮತ್ತು ಜನಪ್ರಿಯತೆಯ ಅಲೆಯಲ್ಲಿ ತೇಲುತ್ತಿದ್ದ ಕಿರುತೆರೆಗೆ, ಲಾಕ್​ಡೌನ್​ನಿಂದ ಹಲವು ರೀತಿಯ ಸವಾಲುಗಳು ಉದ್ಭವಿಸಿವೆ. ಜನರನ್ನು ಮತ್ತೆ ಧಾರಾವಾಹಿ ನೋಡುವಂತೆ ಮಾಡುವುದು ಒಂದಾದರೆ, ಧಾರಾವಾಹಿ ನಿರ್ವಣವೂ ಎರಡನೆಯದು. ಈ ಎರಡೂ ಸವಾಲುಗಳನ್ನು ಕಿರುತೆರೆಯವರು ಹೇಗೆ ನಿಭಾಯಿಸುತ್ತಾರೆ ಎಂದು ಮುಂದಿನ ದಿನಗಳಲ್ಲಿ ನೋಡಬೇಕು.

    ಚಿತ್ರಿಕರಣವೇ ದೊಡ್ಡ ಸವಾಲು: ‘ಮಂಗಳಗೌರಿ’, ‘ರಂಗನಾಯಕಿ’, ‘ಗೀತಾ’ ಮತ್ತು ‘ನಾಗಿಣಿ 2’ ಧಾರಾವಾಹಿಗಳನ್ನು ನಿರ್ದೇಶಿಸುತ್ತಿರುವ ರಾಮ್ ಸಹ ಲಾಕ್​ಡೌನ್ ಮುಗಿದ ಮೇಲೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ‘ಧಾರಾವಾಹಿ ನೋಡುವುದಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ರೆಡಿ ಮಾಡುವುದರ ಜತೆಗೆ, ಚಿತ್ರೀಕರಣ ಮಾಡುವುದು ದೊಡ್ಡ ಸವಾಲಿದೆ. ಪ್ರಮುಖವಾಗಿ ಕಲಾವಿದರು ಅಭಿನಯ ಮಾಡದೆ ಹಲವು ದಿನಗಳಾಗಿವೆ. ಅವರ ತಲೆಯಲ್ಲಿ ಮತ್ತೆ ಪಾತ್ರ ಕೂರಿಸಬೇಕು. ಹಳಬರು ಸುಲಭವಾಗಿ ತಮ್ಮ ಪಾತ್ರ ಮುಂದುವರೆಸಬಹುದು. ಆದರೆ, ಹೊಸಬರನ್ನು ಮತ್ತೆ ಆ ಮೂಡ್​ಗೆ ಕರೆದುಕೊಂಡು ಹೋಗುವದಕ್ಕೆ ಒಂದಿಷ್ಟು ಸಮಯವಾಗುತ್ತದೆ. ಇನ್ನು ಮುಂಚಿನಂತೆ ಚಿತ್ರೀಕರಣಕ್ಕೆ ಮನೆಗಳು ಸಿಗುವುದು ಕಷ್ಟ. ಸಿಕ್ಕರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿ, ಚಿತ್ರೀಕರಣ ಮಾಡುವುದು ಬಹಳ ಕಷ್ಟವಿದೆ. ಈ ಬಗ್ಗೆ ಹಲವು ತಯಾರಿಗಳನ್ನು ಮಾಡಿಕೊಂಡು ಆ ನಂತರ ಕೆಲಸ ಶುರು ಮಾಡಬೇಕಿದೆ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts