

ವಿಜಯಪುರ: ಜಗ್ಗಲಿಗೆ ಮೇಳದ ಘರ್ಜನೆ, ಚಿಕ್ಕ ಹಲಗೆ ಮೇಳದ ಸಂಚಲನ, ದೊಡ್ಡಾಟ ಕಲಾ ಪ್ರಕಾರದ ಅದ್ದೂರಿ ಪ್ರದರ್ಶನ, ಡೊಳ್ಳಿನ ನಿನಾದ, ವೀರಗಾಸೆ, ಗೊಂಬೆ ಕುಣಿತದ ಸಡಗರ ಹಾಗೂ ಸಂಭ್ರಮದೊಂದಿಗೆ ಮರಾಠಿ ನೆಲದಲ್ಲಿ ಗಡಿನಾಡ ಕನ್ನಡಿಗರ ಸಮಾವೇಶ ಅದ್ದೂರಿಯಾಗಿ ನಡೆಯಿತು.
ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಕರ್ನಾಟಕ ಸಂಭ್ರಮ 50ರ ನಿಮಿತ್ತ, ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಡೆಸ ಗಡಿನಾಡು ಕನ್ನಡಿಗರ ಸಮಾವೇಶಕ್ಕೆ ಅದ್ದೂರಿಯಾಗಿ ಚಾಲನೆ ದೊರಕಿತು. ವರದಾನಿ ಶ್ರೀ ದಾನಮ್ಮದೇವಿ ದೇವಸ್ಥಾನದಿಂದ ಕರ್ನಾಟಕ ಭವನದ ಎದುರಿಗಿನ ವಿಶಾಲ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಹಾಗೂ ವಿವಿಧ ಗಣ್ಯರು ಭವ್ಯ ರಥದಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದರು.
ನಾಡಿನ ನಾನಾ ಭಾಗಗಳಿಂದ ಬಂದ ಕಲಾ ತಂಡಗಳ ಪ್ರದರ್ಶನ ಗಡಿ ಕನ್ನಡಿಗರಲ್ಲಿ ಸಂಚಲನ ಮೂಡಿಸಿತು. ವಾದ್ಯಗಳು, ಕಲಾವಿದರು, ಸಾಹಿತಿಗಳು ಹಾಗೂ ರಾಜಕೀಯ ಧುರೀಣರು ಮೆರವಣಿಗೆಗೆ ಮೆರಗು ನೀಡಿದರು.