

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದು, ಸೀಸನ್ 10ರ ಯಶಸ್ಸಿನ ಬೆನ್ನಲ್ಲೇ ಸೀಸನ್ 11ರ ಭರ್ಜರಿ ಯಶಸ್ಸಿಗೆ ಬಿಗ್ ತಂಡ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ. ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿರುವ ಕಿಚ್ಚ ಸುದೀಪ್, ಎಂದಿನಂತೆ ತಮ್ಮ ಖಡಕ್ ಮಾತಿನ ಶೈಲಿಯಲ್ಲೇ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು, 17 ಘಟಾನುಘಟಿ ಸ್ಪರ್ಧಿಗಳು ಬಿಗ್ ಮನೆಗೆ ಸ್ವಾಗತಿಸಿದ್ದಾರೆ. ಸೀಸನ್ 11ರ (BBKS11) ಮನೆಯೊಳಗೆ ಅದ್ಧೂರಿಯಾಗಿ ಎಂಟ್ರಿಕೊಟ್ಟ ಸ್ಪರ್ಧಿಗಳ ಪೈಕಿ ಕೆಲವರ ಮುಖದಲ್ಲಿ ಮಂದಹಾಸ ಮೂಡಿದರೆ, ಇನ್ನು ಕೆಲವರಲ್ಲಿ ಬೇಸರ ಕಾಡಲಾರಂಭಿಸಿದೆ. ಅದಕ್ಕೆ ಕಾರಣವೂ ಇದೆ.
ಧನರಾಜ್ ಆಚಾರ್, ಗೌತಮಿ ಜಾಧವ್, ಲಾಯರ್ ಜಗದೀಶ್, ತ್ರಿವಿಕ್ರಮ್, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್, ಐಶ್ವರ್ಯಾ ಶಿಂಧೋಗಿ, ಅನುಷಾ ರೈ, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಮಾನಸ ಸಂತೋಷ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ಮತ್ತು ರಂಜಿತ್.
ಸ್ವರ್ಗ ಸೇರಿದ ಸ್ಪರ್ಧಿಗಳು: ಧನರಾಜ್ ಆಚಾರ್, ಗೌತಮಿ ಜಾಧವ್, ಲಾಯರ್ ಜಗದೀಶ್, ತ್ರಿವಿಕ್ರಮ್, ಯಮುನಾ ಶ್ರೀನಿಧಿ, ಭವ್ಯಾ, ಹಂಸಾ ಪ್ರತಾಪ್, ಐಶ್ವರ್ಯಾ ಶಿಂಧೋಗಿ ಮತ್ತು ಉಗ್ರಂ ಮಂಜು.
ನರಕಕ್ಕೆ ಹೋದ ಸ್ಪರ್ಧಿಗಳು: ಅನುಷಾ ರೈ, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಮಾನಸಾ ಸಂತೋಷ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್.
ಇದನ್ನೂ ಓದಿ: ಮೂರು ಅಮೂಲ್ಯ ರತ್ನಗಳು
ಸದ್ಯ ಇವರೆಲ್ಲರ ಪೈಕಿ ಮನೆಯಲ್ಲಿ ಬಹಳ ಸದ್ದು ಮಾಡುವ ಸ್ಪರ್ಧಿಗಳು ಎಂದು ಈಗಾಗಲೇ ವೀಕ್ಷಕರಲ್ಲಿ ಭಾರೀ ಭರವಸೆ ಮೂಡಿಸಿರುವವರು ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್. ಅಸಲಿಗೆ ಈ ಇಬ್ಬರು ರೆಬೆಲ್ ಸ್ಪರ್ಧಿಗಳಾಗಿ, ಎದುರು-ಬದುರು ಆಡುತ್ತಿರುವುದೇ ವೀಕ್ಷಕರಿಗೆ ಅಸಲಿ ಆಟ ಈಗ ಶುರು ಎಂಬ ಪದವನ್ನು ಪದೇ ಪದೇ ನೆನಪಿಸುವಂತಿದೆ. ಒಂದೇ ಸೂರಿನಡಿ ಇವರಿಬ್ಬರು ಪೈಪೋಟಿಗೆ ಇಳಿದರೆ, ಅಲ್ಲಿ ಗತ್ತು-ಗಮ್ಮತ್ತು ಕಾಣಿಸುವುದಿಲ್ಲ ಎಂಬುದು ಹಲವರಿಗೆ ತಿಳಿದಿದೆ. ಹೀಗಾಗಿ ಮುಂಬರುವ ಟಾಸ್ಕ್ನಲ್ಲಿ ಚೈತ್ರಾ-ಜಗದೀಶ್ ನಡುವಿನ ಮಾತಿನ ಜ್ವಾಲೆ ಸ್ಫೋಟಗೊಳ್ಳುವುದರಲ್ಲಿ ಕಿಂಚಿತ್ತು ಅನುಮಾನವೇ ಇಲ್ಲ ಎಂಬುದು ಸದ್ಯ ವೀಕ್ಷಕರಿಗೆ ತಿಳಿದಿರುವ ಸಂಗತಿ. ಚೈತ್ರಾ ಜತೆ ಗೋಲ್ಡ್ ಸುರೇಶ್ ಕೂಡ ಧ್ವನಿ ಏರಿಸುವ ನಿರೀಕ್ಷೆಗಳು ಹೆಚ್ಚಿದ್ದು, ಬಿಗ್ಬಾಸ್ ಕೊಡುವ ಮೊದಲ ಟಾಸ್ಕ್ ಯಾವುದಾಗಿರಲಿದೆ ಎಂಬುದನ್ನು ಸದ್ಯ ಮುಂಬರುವ ಸಂಚಿಕೆಯಲ್ಲಿ ಕಾದು ತಿಳಿಯಬೇಕಿದೆ.