ಸಂಸದ ಚಿರಾಗ್ ಪಾಸ್ವಾನ್ ಜತೆಗಿನ ಫೋಟೋ ವೈರಲ್​: ಕಡೆಗೂ ಮೌನಮುರಿದ ನಟಿ ಕಂಗನಾ ರಣಾವತ್​!

ವಿಜಯವಾಣಿ (67)
Published on

ಮುಂಬೈ: ಹಿಮಾಚಲ ಪ್ರದೇಶದ ಮಂಡಿ ಸಂಸದೆಯಾದೆ ನಟಿ ಕಂಗನಾ ರಣಾವತ್ ತಮ್ಮ ಸಹ ನಟ, ಸಂಸದ ಚಿರಾಗ್ ಪಾಸ್ವಾನ್ ಜತೆ ಸಂಸತ್ತಿನಲ್ಲಿ ಕಾಣಿಸಿಕೊಂಡ ಹಾಗೂ ಜತೆಗಿರುವ ಫೋಟೋಗಳು ಸದ್ಯ ಜಾಲತಾಣಗಳಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇವರಿಬ್ಬರ ನಡುವೆ ಪ್ರೀತಿ-ಪ್ರೇಮ ಇರಬಹುದು ಎಂಬ ಗುಮಾನಿಗಳು ಹರಿದಾಡುತ್ತಿವೆ. 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಕಂಗನಾ ಎಂದಿನಂತೆ ವಿವಾದದ ಅಲೆಯಲ್ಲಿ ಮುಂದುವರೆದಿದ್ದೇ ಆದರೂ ಈ ವಿಷಯದಲ್ಲಿ ಮಾತ್ರ ಪ್ರತ್ಯೇಕವಾಗಿ ಸುದ್ದಿಯಾಗುತ್ತಿದ್ದಾರೆ. ಆಗಾಗ್ಗೆ ಸಂಸತ್ತಿನಲ್ಲಿ ಪರಸ್ಪರ ಭೇಟಿಯಾಗುವ ಇವರಿಬ್ಬರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಕಡೆಗೂ ಮೌನ ಮುರಿದಿದ್ದಾರೆ.

ಪಸ್ತುತ ಬಿಡುಗಡೆಗೆ ಎದುರುನೋಡುತ್ತಿರುವ ತಮ್ಮ 'ಎಮರ್ಜೆನ್ಸಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಕಂಗನಾ ರಣಾವತ್ ಈ ಫೋಟೋ ವದಂತಿ ಬಗ್ಗೆ ಪ್ರತಿಕ್ರಿಯಿಸಿ, "ದಯವಿಟ್ಟು ಕನಿಷ್ಠ ಪಕ್ಷ ನಾವಿಬ್ಬರು ಸಂಸತ್ತಿನಲ್ಲಿ ಮಾತನಾಡಲು ಬಿಟ್ಟುಬಿಡಿ. ಚಿರಾಗ್ ನನಗೆ ಬಹಳ ಹಿಂದಿನಿಂದಲೂ ಗೊತ್ತಿರುವ ವ್ಯಕ್ತಿ. ಆತ ಒಬ್ಬ ಒಳ್ಳೆಯ ಸ್ನೇಹಿತ. ಒಂದೆರಡು ಬಾರಿ ಕ್ಯಾಮರಾ ಮುಂದೆ ನನ್ನ ನಗಿಸಿದ ಎಂಬ ಒಂದೇ ಒಂದು ಕಾರಣಕ್ಕೆ ಜನರು ಅವರ ಹಿಂದೆ ಬಿದ್ದಿದ್ದಾರೆ. ಈಗ ಸಂಸತ್ತಿನಲ್ಲಿ ಅಥವಾ ಎಲ್ಲಾದರೂ ಅವರನ್ನು ಮಾತನಾಡಿಸಲು ನೋಡಿದ್ರೆ, ತಕ್ಷಣವೇ ತಮ್ಮ ದಾರಿಯನ್ನು ಬದಲಾಯಿಸಿಕೊಂಡು ಹೋಗ್ತಾರೆ" ಎಂದು ಕಂಗನಾ ಹೇಳಿದ್ದಾರೆ.

ಇನ್ನು ತನ್ನ ಹಾಗೂ ಸಂಸದೆ ಕಂಗನಾ ಬಗ್ಗೆ ಮಾತನಾಡದ ಚಿರಾಗ್ ಪಾಸ್ವಾನ್, "ನನ್ನ ಸಿನಿ ಕರಿಯರ್​ ನಿಜವಾಗಲೂ ವಿಚಿತ್ರವಾಗಿತ್ತು. ಅಸಲಿಗೆ ನಾನು ನಟನೆಗೆ ಸರಿಯಲ್ಲ ಎಂದು ನನಗೆ ಅನಿಸಿತು. ಈ ವೃತ್ತಿಗೆ ನನ್ನ ಅವಶ್ಯಕತೆ ಇಲ್ಲ ಎಂಬುದು ಅರಿವಾದ ನಂತರವೇ ನಾನು ರಾಜಕೀಯಕ್ಕೆ ಕಾಲಿಟ್ಟೆ" ಎಂದು ಹೇಳಿದರು. ಅಸಲಿಗೆ ಇಲ್ಲಿ ಪ್ರಸ್ತುತ ವೈರಲ್ ಆಗ್ತಿರುವ ಕಂಗನಾ ಮತ್ತು ತಮ್ಮ ಫೋಟೋ ವಿಚಾರದ ಬಗ್ಗೆ ತುಟಿ ಬಿಚ್ಚದ ಚಿರಾಗ್​, ನಟನೆ ಬಗ್ಗೆ ಮಾತ್ರ ಮಾತನಾಡಿ ವದಂತಿಗಳಿಂದ ಜಾರಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net