

ನವದೆಹಲಿ: ಐಪಿಎಲ್ 2024ರ ಆವೃತ್ತಿಯ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕೊಟ್ಟು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದ್ವಿತೀಯಾರ್ಧದಲ್ಲಿ ಯಾರೂ ಊಹಿಸಲಾರದ ಪ್ರದರ್ಶನ ನೀಡಿ, ಸತತ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇಆಫ್ಗೆ ರೋಚಕವಾಗಿ ಎಂಟ್ರಿ ಕೊಟ್ಟಿತು. ಇದು ಐಪಿಎಲ್ ಇತಿಹಾಸದಲ್ಲೇ ನೆನಪಿಟ್ಟುಕೊಳ್ಳುವಂತ ಶಾಕಿಂಗ್ ಕಮ್ಬ್ಯಾಕ್ ಎಂದರೆ ತಪ್ಪಾಗಲಾರದು. ಸೌತ್ ಆಫ್ರಿಕನ್ ಪ್ರತಿಭೆ ಫಾಫ್ ಡುಪ್ಲೆಸಿಸ್ ಕ್ಯಾಪ್ಟನ್ಸಿಯಲ್ಲಿ ಆಡಿದ ಆರ್ಸಿಬಿ ತಂಡ ನಿರೀಕ್ಷೆಗೂ ಮೀರಿ ಒಂದೊಳ್ಳೆ ಇನ್ನಿಂಗ್ಸ್ ಕೊಟ್ಟಿದ್ದು ಬೆಂಗಳೂರು ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳು. ಅದರಲ್ಲೂ ಪ್ಲೇಆಫ್ ಎಂಟ್ರಿಗಿದ್ದ ಒಂದೇ ಒಂದು ರೋಚಕ ಪಂದ್ಯದಲ್ಲಿ ಬಲಿಷ್ಠ ಸಿಎಸ್ಕೆ ಪಡೆಯನ್ನು ಹೀನಾಯವಾಗಿ ಮಣಿಸಿದ್ದು ಇತಿಹಾಸ ಎಂದೇ ಫ್ಯಾನ್ಸ್ ಇಂದಿಗೂ ಭಾವಿಸುತ್ತಾರೆ.
ಇನ್ನು ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ಆರ್ಸಿಬಿ, ಅಭಿಮಾನಿಗಳ ಕಪ್ ಕನಸನ್ನು ಈ ಬಾರಿಯೂ ಕನಸಾಗಿಯೇ ಉಳಿಸಿತು. ಇದು ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಅತೀವ ನೋವುಂಟುಮಾಡಿತು. ಈ ವಿಷಯವನ್ನು ಮುಂದಿಟ್ಟು ಮಾತನಾಡಿದ ಮಾಜಿ ಕ್ರಿಕೆಟಿಗರು, ಆರ್ಸಿಬಿ ಆಟಗಾರರನ್ನು ಮತ್ತು ಫ್ರಾಂಚೈಸಿಯನ್ನು ವ್ಯಂಗ್ಯವಾಡಿದ್ದರು. ಇದೀಗ ಕ್ರಿಕೆಟ್ ಪ್ರೇಮಿಗಳ ಚಿತ್ತ 2025ರ ಐಪಿಎಲ್ನತ್ತ ಮೂಡಿದ್ದು, ಶೀಘ್ರವೇ ನಡೆಯಲಿರುವ ಆಕ್ಷನ್ ಪ್ರಕ್ರಿಯೆಯಲ್ಲಿ ಯಾರನ್ನು ತಂಡದಿಂದ ಕೈಬಿಡಲಾಗುವುದು, ಉಳಿಸಿಕೊಳ್ಳಲಾಗುವುದು ಎಂಬ ಪ್ರಶ್ನೆ ಸದ್ಯ ಭಾರೀ ಚರ್ಚೆಯಾಗುತ್ತಿದೆ.
ಸದ್ಯ ಆರ್ಸಿಬಿ ತಂಡಕ್ಕೆ ನಾಯಕನಾಗಿರುವ ಫಾಫ್ ಡುಪ್ಲೆಸಿಸ್ 17ನೇ ಆವೃತ್ತಿಯಲ್ಲಿ ಅಂತಹ ನಾಯಕತ್ವ ತೋರಲಿಲ್ಲ. ಟೀಮ್ ಪರ ಅಲ್ಲಲ್ಲಿ ಒಂದಷ್ಟು ಉತ್ತಮ ಇನ್ನಿಂಗ್ಸ್ ನೀಡಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳಲ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದು, ವಿರಾಟ್ ಕೊಹ್ಲಿಯನ್ನು ಏಕಾಂಗಿ ಹೋರಾಟ ನಡೆಸುವಂತೆ ಬಿಟ್ಟೋಗುತ್ತಿದ್ದರು. ಇದು ಚಾಲೆಂಜರ್ಸ್ ಅಭಿಮಾನಿಗಳಲ್ಲಿ ಆ ಕ್ಷಣಕ್ಕೆ ತೀವ್ರ ಅಸಮಾಧಾನಕ್ಕೆ ದೂಡುತ್ತಿತ್ತು. ಕೇವಲ ಬ್ಯಾಟಿಂಗ್ ಪ್ರದರ್ಶನ ಮಾತ್ರವಲ್ಲದೇ ನಾಯಕತ್ವ ಜವಾಬ್ದಾರಿಯಲ್ಲಿಯೂ ಹಿನ್ನಡೆ ಅನುಭವಿಸಿದ ಫಾಫ್ರನ್ನು ಈ ಬಾರಿ ನಡೆಯಲಿರುವ ಐಪಿಎಲ್ ಆಕ್ಷನ್ನಲ್ಲಿ ಉಳಿಸಿಕೊಳ್ಳುವುದು ಬಹುತೇಕ ಡೌಟ್ ಎಂದೇ ಹೇಳಲಾಗುತ್ತಿದೆ.
ಆರ್ಸಿಬಿ ತಂಡಕ್ಕೆ ಬರುವ ಮುನ್ನ ಅಂದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಫಾಫ್ ಅತ್ಯುತ್ತಮ ಓಪನರ್ ಆಗಿ ಟೀಮ್ನಲ್ಲಿ ಗುರುತಿಸಿಕೊಂಡಿದ್ದರು. ಅತ್ಯದ್ಭುತ ಕ್ಯಾಚ್, ಫೀಲ್ಡಿಂಗ್ನಿಂದ ಹಿಡಿದು ಅತೀ ಹೆಚ್ಚು ರನ್ ಗಳಿಸುವ ಸ್ಟಾರ್ ಪ್ಲೇಯರ್ ಆಗಿ ಮಿಂಚಿದ್ದ ಡುಪ್ಲೆಸಿಸ್ ನಂತರ ಆರ್ಸಿಬಿಯಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ವೈಖರಿ ಮುಂದುವರೆಸಿದ್ದರು. ಆದ್ರೆ, ರಾಯಲ್ಸ್ ಟೀಮ್ನಲ್ಲಿ ನಾಯಕನಾಗಿ ಫಾಫ್ರ ಅಬ್ಬರ ಕಾಣದೇ ಹೋಯಿತಲ್ಲ ಎಂಬುದೇ ಅನೇಕರ ಬೇಸರ. ಇದು ಫ್ರಾಂಚೈಸಿಯ ನೋವು ಕೂಡ. ಸದ್ಯ ಕೆಳಗೆ ನೀಡಿರುವ ಮೂರು ವಿಷಯಗಳು ಅವರನ್ನು ಈ ಬಾರಿಯ ಆಕ್ಷನ್ನಿಂದ ಕೈಬಿಡಲು ಬಲವಾದ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.
1. ನಾಯಕತ್ವ ಹಿನ್ನಡೆ
2. ಪ್ರದರ್ಶನ ಮತ್ತು ಕಳಪೆ ಫಾರ್ಮ್
3. ಹಣಕಾಸಿನ ಪ್ಲ್ಯಾನ್ ಮತ್ತು ತಂಡ ಕಟ್ಟುವಿಕೆ
ಈ ಮೂರು ಕಾರಣಗಳು ಸದ್ಯ ಆರ್ಸಿಬಿ ಫ್ರಾಂಚೈಸಿಗೆ ಬಲವಾಗಿದ್ದು, ಪ್ರಾಯಶಃ ಮುಂದಿನ ದಿನಗಳಲ್ಲಿ ನಡೆಯಲಿರುವ ಐಪಿಎಲ್ ಆಕ್ಷನ್ನಿಂದ ಫಾಫ್ ಡುಪ್ಲೆಸಿಸ್ಯನ್ನು ತಂಡದಲ್ಲಿ ಉಳಿಸಿಕೊಳ್ಳದೆ ಕೈಬಿಡುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ ಎಂದೇ ಹೇಳಬಹುದು,(ಏಜೆನ್ಸೀಸ್).