

ಹೈದರಾಬಾದ್: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕುರಿತು ಜಸ್ಟೀಸ್ ಹೇಮಾ ಸಮಿತಿಯ ವರದಿ ಸಿನಿ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿರುವುದು ತಿಳಿದ ಸಂಗತಿಯೇ. ವರದಿಗೆ ದೇಶಾದ್ಯಂತ ನಟ, ನಟಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಟಾಲಿವುಡ್ ನಟಿ ಸಮಂತಾ ಅದೇ ರೀತಿಯ ವರದಿಯನ್ನು ಪ್ರಕಟಿಸಬೇಕು ಎಂದು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೇರಳದಲ್ಲಿ ಜಸ್ಟೀಸ್ ಹೇಮಾ ವರದಿ ಬಹಿರಂಗಗೊಂಡ ಬಳಿಕ 9ಮಂದಿ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ. ವಿಶೇಷ ತನಿಖಾ ತಂಡ ರಚಿಸಲಾಗಿದೆ. ಕೇರಳದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್(ಡಬ್ಲ್ಯುಸಿಸಿ)ಯಿಂದ ಪ್ರೇರಿತರಾಗಿ 2019ರಲ್ಲಿ ಸ್ಥಾಪಿತವಾಗಿರುವ ದ ಟಾಲಿವುಡ್ನಲ್ಲಿ ವಾಯ್ಸ್ ಆಫ್ ವುಮೆನ್(ತೆಲುಗು ಫಿಲ್ಮ್ ಇಂಡಸ್ಟ್ರಿ) ಮೂಲಕ ಇದೇ ರೀತಿಯ ವರದಿ ಪ್ರಕಟಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ ಮತ್ತು ಕೇರಳದ ಡಬ್ಲ್ಯುಸಿಸಿಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ. ಮಹಿಳೆಯರ ಶೋಷಣೆ ತಡೆಯುವ ನಿಟ್ಟಿನಲ್ಲಿ ಇದು ಈ ಕ್ಷಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ತೆಲುಗಿ ಫಿಲ್ಮ್ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಕಲ್ಪಿಸಲು ಸರ್ಕಾರ ಮತ್ತು ಉದ್ಯಮ ನೀತಿಗಳನ್ನು ರೂಪಿಸಲು ಸಹಾಯ ಮಾಡುವ ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ ಉಪ ಸಮಿತಿಯ ವರದಿಯನ್ನು ಪ್ರಕಟಿಸಲು ನಾವು ತೆಲಂಗಾಣ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮದಿಂದ ಇತ್ತೀಚೆಗೆ ಅನಾವರಣಗೊಂಡ ಹೇಮಾ ಸಮಿತಿಯ ವರದಿಯು ಕೇರಳ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಪ್ರೇರೇಪಿಸಿತು. ಸದ್ಯಕ್ಕೆ, ನಟ-ರಾಜಕಾರಣಿ ಮುಖೇಶ್ ಮಾಧವನ್, ಸಿದ್ದಿಕ್, ಜಯಸೂರ್ಯ, ಎಡವೇಲ ಬಾಬು, ಮಣಿಯನ್ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್ ಮತ್ತು ವಿಕೆ ಪ್ರಕಾಶ್ ಮತ್ತು ನಿರ್ಮಾಣ ಕಾರ್ಯನಿರ್ವಾಹಕರಾದ ವಿಚು ಮತ್ತು ನೋಬಲ್ ಸೇರಿದಂತೆ ಒಂಬತ್ತು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.