

ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಚಿತ್ರದ ಮೊದಲ ಲುಕ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಫಸ್ಟ್ಲುಕ್ ಮೂಲಕವೇ ಸಖತ್ ಸುದ್ದಿ ಸಹ ಮಾಡಿದೆ. ಟ್ವಿಟರ್ನಲ್ಲಿಯೂ ಟ್ರೆಂಡ್ ಆಗಿತ್ತು ರಾಧೆ ಶ್ಯಾಮ್ ಪೋಸ್ಟರ್. ಅಷ್ಟೇ ಅಲ್ಲ ಅದೇ ಪೋಸ್ಟರ್ನನ್ನು ಅಸ್ಸಾಂ ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ಕೂ ಬಳಸಿಕೊಂಡಿತ್ತು. ಇದೀಗ ಇದೇ ತಂಡ ಪೋಸ್ಟರ್ ವಿಚಾರದಲ್ಲಿ ಕಾಪಿ ಹೊಡೆದಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.
2015ರಲ್ಲಿ ತೆಲುಗಿನಲ್ಲಿ ‘ಕಾಂಚೆ’ ಶೀರ್ಷಿಕೆಯ ಸಿನಿಮಾ ತೆರೆಕಂಡಿತ್ತು. ಮುಖ್ಯಭೂಮಿಕೆಯಲ್ಲಿ ವರುಣ್ ತೇಜ ನಾಯಕನಾಗಿ ನಟಿಸಿದ್ದರು. ಇದೀಗ ಕಾಂಚೆ ಚಿತ್ರದ ಪೋಸ್ಟರ್ಗೂ ಮತ್ತು ರಾಧೆ ಶ್ಯಾಮ್ ಪೋಸ್ಟರ್ನಲ್ಲಿ ಸಾಮ್ಯತೆ ಕಂಡು ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ವಿಷಯವಾಗಿದೆ.
ಮುಖ್ಯವಾದ ವಿಚಾರ ಏನೆಂದರೆ, ಕಾಂಚೆ ಚಿತ್ರದ ಪೋಸ್ಟರ್ನಲ್ಲಿನ ಭಂಗಿಗೂ ಮತ್ತು ರಾಧೆ ಶ್ಯಾಮ್ ಚಿತ್ರದಲ್ಲಿನ ಭಂಗಿ ಒಂದೇ ಥರ ಗೋಚರಿಸುತ್ತದೆ. ಕಲರ್ ಕಾಂಬಿನೇಷನ್ನಲ್ಲೂ ಎರಡೂ ಪೋಸ್ಟರ್ಗಳಲ್ಲಿ ಕೆಂಪು ಬಣ್ಣವೇ ಹೈಲೈಟ್. ಜತೆಗೆ ಕಾಂಚೆ ಸಿನಿಮಾ ಪಿರಿಯಡ್ ಡ್ರಾಮಾ ಶೈಲಿಯಲ್ಲಿ ಸಿದ್ಧವಾಗಿತ್ತು. ಅದೇ ಥರಹ ರಾಧೆ ಶ್ಯಾಮ್ ಸಹ ಪೀರಿಯಡ್ ಡ್ರಾಮಾ ಶೈಲಿಯ ಸಿನಿಮಾ ಎಂದು ಈ ಹಿಂದೆ ನಿರ್ದೇಶಕರು ಸುಳಿವು ನೀಡಿದ್ದರು. ಹೊಸ ಪೋಸ್ಟರ್ನಲ್ಲಿ ಇಟಲಿಯ ಬ್ಯಾಕ್ಡ್ರಾಪ್ ಸಹ ಕುತೂಹಲ ಮೂಡಿಸುತ್ತಿದೆ.
ಒಟ್ಟಿನಲ್ಲಿ ಪೋಸ್ಟರ್ವೊಂದರಿಂದಲೇ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ರಾಧೆ ಶ್ಯಾಮ್ ಚಿತ್ರ ಶೂಟಿಂಗ್ ಯಾವಾಗಿನಿಂದ ಆರಂಭಿಸಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ನಿರಾಸೆ ಆಗಬಾರದೆಂಬ ಕಾರಣಕ್ಕೆ ಪೋಸ್ಟರ್ ಬಿಡುಗಡೆ ಮಾಡಿ ಸಂತಸಪಡಿಸಿದೆ. ಎಲ್ಲ ಅಂದುಕೊಂಡಂತೆ ಆದರೆ, 2021ರ ಆರಂಭ ಅಥವಾ 2021ರ ಆಗಸ್ಟ್ ವೇಳೆಗೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ರಾಧಾಕೃಷ್ಣ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್)