

ಬಾಲಿವುಡ್‍ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾರಾದರೂ ಅತೀ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆಂದರೆ ಅದು ಹಿರಿಯ ನಟ ಅನುಪಮ್ ಖೇರ್. ಕಳೆದ 35 ವರ್ಷಗಳಲ್ಲಿ ಅನುಪಮ್ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಹಿಂದಿ ಚಿತ್ರರಂಗದ ಬೇಡಿಕೆಯ ನಟರಾಗಿದ್ದಾರೆ.
ಆದರೆ, ಅನುಪಮ್ ಇಷ್ಟು ದೂರ ಸಾಗಬಹುದು ಎಂದು ಹಲವರಿಗೆ ನಂಬಿಕೆ ಇರಲಿಲ್ಲವಂತೆ. ಕಾರಣ, ಬಹಳ ಚಿಕ್ಕ ವಯಸ್ಸಿನಲ್ಲೇ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡಿದವರು ಅನುಮಪ್ ಖೇರ್. ಈ ರೀತಿ ಪ್ರಯೋಗಗಳನ್ನು ಮಾಡುತ್ತಾ ಹೋದರೆ ಹೆಚ್ಚು ದಿನಗಳ ಕಾಲ ಚಿತ್ರರಂಗದಲ್ಲಿ ಉಳಿಯುವುದಕ್ಕೆ ಸಾಧ್ಯವಿಲ್ಲ ಎಂಬುದು ಹಲವರ ನಂಬಿಕೆಯಾಗಿತ್ತಂತೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, `ನಾನು `ಸಾರಂಶ್' ಚಿತ್ರದಲ್ಲಿ ನಟಿಸಿದಾಗ ನನಗಿನ್ನೂ 30 ವರ್ಷ ಸಹ ಆಗಿರಲಿಲ್ಲ. ಆದರೆ, ಅದರಲ್ಲಿ ನನ್ನದು 60 ವರ್ಷ ಮೇಲ್ಪಟ್ಟ ಹಿರಿಯನ ಪಾತ್ರವಾಗಿತ್ತು. ಈ ತರಹದ್ದೊಂದು ರಿಸ್ಕ್ ಬೇಡ ಎಂದು ಬಹಳಷ್ಟು ಜನ ನನಗೆ ಹೇಳಿದರು. ನೀನು ಹಾಳಾಗಿ ಹೋಗ್ತೀಯ, ಜೀವನ ಪೂರ್ತಿ ಮುದುಕನ ಪಾತ್ರ ಮಾಡಿಕೊಂಡು ಇರುತ್ತೀಯ ಎಂದು ಹೆದರಿಸಿದ್ದರು. ಆದರೆ, ನನಗೆ ಪ್ರಯೋಗ ಮಾಡುವ ಆಸೆ ಇತ್ತು. ನಾನೇನು ಅಲ್ಲವೋ, ಅದನ್ನು ಮಾಡುವ ಆಸಕ್ತಿ ಇತ್ತು. ಹಾಗಾಗಿ ಮಾಡಿದೆ' ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಗಂಗೂಬಾಯಿ ಜತೆಯಾದ ರಣವೀರ್
ಆ ಚಿತ್ರದಲ್ಲಿ ಅವರು ವೃದ್ಧನ ಪಾತ್ರ ಮಾಡಿ ಗೆದ್ದರೂ, ಅದಕ್ಕೇ ಅಂಟಿಕೊಂಡು ಕೂರಲಿಲ್ಲ. ಬೇರೆ ಚಿತ್ರಗಳಲ್ಲಿ ವಿಧವಿಧ ಪಾತ್ರಗಳನ್ನು ಮಾಡಿದರು. `ಆ ನಂತರ ನಾನು ಹಲವು ತರಹದ ಪಾತ್ರಗಳಲ್ಲಿ ಕಾಣಿಸಿಕೊಂಡೆ. `ಕರ್ಮ', `ಖೋಸ್ಲಾ ಕೆ ಗೋಸ್ಲಾ', `ಎ ವೆಡ್‍ನೆಸ್ಡೆ', `ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ' ಮುಂತಾದ ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡು, ನಾನೇನು ಎಂದು ತೋರಿಸಿದೆ' ಎಂದು ಅವರು ಹೇಳಿದ್ದಾರೆ.
ಇದಕ್ಕೆಲ್ಲಾ ಕಾರಣ ತಮ್ಮಲ್ಲಿದ್ದ ಆತ್ಮವಿಶ್ವಾಸ ಎನ್ನುವ ಅವರು, `ಎಲ್ಲರಿಗೂ ಒಂದಲ್ಲಾ ಒಂದು ಹಂತದಲ್ಲಿ ಡಿಪ್ರೆಶನ್ ಕಾಡುತ್ತದೆ. ಅದರಿಂದ ಆಚೆಬಂದು ಹೊಸ ಜೀವನ ಕಂಡುಕೊಳ್ಳುವುದು ಬಹಳ ಮುಖ್ಯ' ಎನ್ನುವುದು ಅವರ ವಾದ.