

ಸಲ್ಮಾನ್ ಖಾನ್ ನಾಯಕತ್ವದ ‘ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾ ಇಷ್ಟೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ, ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿತು. ಕಳೆದ ನಾಲ್ಕು ತಿಂಗಳಿಂದ ಯಾವ ಕೆಲಸಗಳೂ ಶುರುವಾಗಲಿಲ್ಲ. ಇದೀಗ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳ ನಡುವೆಯೇ ಮತ್ತೆ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲ್ಯಾನ್ ಹಾಕಿದ್ದು, ಸಲ್ಮಾನ್ ಖಾನ್ ಸಹ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಕಂಗನಾ ವಿಷಯದಲ್ಲಿ ಉಲ್ಟಾ ಹೊಡೆದ ಅಧ್ಯಯನ್ …
ಪ್ರಭುದೇವ ನಿರ್ದೇಶನದ ಈ ಸಿನಿಮಾದ ಹಾಡುಗಳ ಚಿತ್ರೀಕರಣಕ್ಕೆ ಅಝರ್ಬೈಜಾನ್ ದೇಶಕ್ಕೆ ತೆರಳುವ ನಿರ್ಧಾರ ಕೈಗೊಂಡಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ವಿದೇಶಿ ಚಿತ್ರೀಕರಣಕ್ಕೆ ಬೈ ಬೈ ಹೇಳಿರುವ ನಿರ್ದೇಶಕರು, ಮುಂಬೈನ ಸಿಟಿ ಸ್ಟುಡಿಯೋದಲ್ಲಿಯೇ ಹಾಡು ಮತ್ತು ಆ್ಯಕ್ಷನ್ ಸನ್ನಿವೇಶದ ಚಿತ್ರೀಕರಣ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಗ್ರೀನ್ ಪರದೆಯ ಮುಂದೆ ಚಿತ್ರೀಕರಣ ಮಾಡಿಕೊಂಡು, ಅದಕ್ಕೆ ವಿಎಫ್ಎಕ್ಸ್ ಟಚ್ ಕೊಟ್ಟು, ವಿದೇಶದಂತೆ ಬಿಂಬಿಸಲಿದ್ದಾರೆ.
ಅಂದಹಾಗೆ, ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಇನ್ನು 10ರಿಂದ 12 ದಿನಗಳ ಚಿತ್ರೀಕರಣ ಮಾಡಿಕೊಂಡರೆ ಸಿನಿಮಾ ಮುಕ್ತಾಯವಾಗಲಿದೆ. ಸಲ್ಮಾನ್ ಖಾನ್ ಸಹ ಶೂಟಿಂಗ್ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ದಿಶಾ ಪಠಾಣಿ ಸಹ ಪಾಲ್ಗೊಳ್ಳಲಿದ್ದಾರೆ. ಸದ್ಯ ನಿರ್ಮಾಪಕರ ಪ್ರಕಾರ ಅಕ್ಟೋಬರ್ ನವೆಂಬರ್ ವೇಳೆಗೆ ಸಿನಿಮಾ ತೆರೆಕಾಣಿಸಬೇಕೆಂಬ ಪ್ಲ್ಯಾನ್ ಹಾಕಿದ್ದಾರೆ. ದೀಪಾವಳಿಯಂದೇ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆಯಾದರೂ, ಕರೊನಾ ಹಾವಳಿಯ ಸ್ಥಿತಿಗತಿ ನೋಡಿಕೊಂಡು ಮುಂದಿವರಿಯಲಿದ್ದಾರೆ ನಿರ್ಮಾಪಕರು. (ಏಜೆನ್ಸೀಸ್)