

ಎಸ್ಪಿ ಬಾಲಸುಬ್ರಮಣ್ಯಂ ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗೆ ಇಡೀ ದೇಶ ಪ್ರಾರ್ಥಿಸುತ್ತಿದೆ. ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಮರಳಿ ಬನ್ನಿ ಎಂದು ಅವರೊಟ್ಟಿಗೆ ಕಳೆದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸೌತ್ ಸೂಪರ್ಸ್ಟಾರ್ ಕಮಲ್ ಹಾಸನ್ ಸಹ ಅವರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.
‘ನನ್ನ ನಲ್ಮೆಯ ಸಹೋದರನೇ, ನಾವೆಲ್ಲ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇವೆ. ತುಂಬ ವರ್ಷಗಳಿಂದ ನನ್ನ ಧ್ವನಿಯಾಗಿದ್ದೀರಿ. ನಿಮ್ಮ ಧ್ವನಿಗೆ ನಾನು ಮುಖವಾಗಿದ್ದೇನೆ. ನಿಮ್ಮ ಧ್ವನಿ ಕೇಳಬೇಕೆನಿಸುತ್ತಿದೆ. ಮರಳಿ ಬನ್ನಿ. ಆದಷ್ಟು ಬೇಗ ಬನ್ನಿ’ ಎಂದಿದ್ದಾರೆ.
ಕಮಲ್ ಹಾಸನ್ ಮತ್ತು ಎಸ್ಪಿಬಿ ಹಲವು ದಶಕಗಳಿಂದ ಸ್ನೇಹಿತರು. ಕಮಲ್ ಅವರ ಸಾಕಷ್ಟು ಸಿನಿಮಾಗಳಿಗೆ ಎಸ್ಪಿಬಿ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ ಕಮಲ್ ಅವರ ಎಷ್ಟೋ ಸಿನಿಮಾಗಳಿಗೆ ಡಬ್ ಸಹ ಮಾಡಿದ್ದಾರೆ. ಇದೀಗ ಆ ಗೆಳೆಯ ಆದಷ್ಟು ಬೇಗ ಗುಣಮುಖನಾಗಿ ಆಗಮಿಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 5 ರಂದು ಕರೊನಾ ಸೋಂಕಿಗೆ ತುತ್ತಾಗಿದ್ದ ಎಸ್ಪಿಬಿ, ಗುರುವಾರ ಹೆಚ್ಚುವರಿ ಚಿಕಿತ್ಸೆಗೆಂದು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿರುವ ಬಗ್ಗೆ ಆಸ್ಪತ್ರೆ ವೈದ್ಯರು ಮತ್ತು ಎಸ್ಪಿಬಿ ಪುತ್ರ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)