

MLA Raju Kage : ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಹಿರಿಯ ಪುತ್ರಿ ಕೃತಿಕಾ ಭರಮಗೌಡ ಕಾಗೆ (37) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ಮಾ.01) ಕೊನೆಯುಸಿರೆಳೆದಿದ್ದಾರೆ.
ಕೃತಿಕಾ ಅವರು ಕೆಲವು ತಿಂಗಳುಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದೇ ಕೃತಿಕಾ ಮೃತಪಟ್ಟಿದ್ದಾರೆ. ಅವರ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.
ಶಾಸಕ ರಾಜು ಕಾಗೆ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇವರಲ್ಲಿ ಕೃತಿಕಾ ಹಿರಿಯರು. ನೇರಲಿ ಗ್ರಾಮದ ನಿವಾಸಿ ಡಾ.ಅನಿಲ ಪಾಟೀಲ್ ಅವರನ್ನು ಕೃತಿಕಾ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷ ಮಗಳಿದ್ದಾಳೆ. ಇದೀಗ ಕೃತಿಕಾ ಅವರು ಅಕಾಲಿಕವಾಗಿ ನಿಧನರಾಗಿರುವುದರಿಂದ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಕೃತಿಕಾ ಅವರ ಸಾವಿಗೆ ಅನೇಕ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸುತ್ತಿದ್ದಾರೆ. (ಏಜೆನ್ಸೀಸ್)