ಮುಂಬೈ: ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನವೇ ತರಬೇತಿ ಅವಧಿಯಲ್ಲೇ ವಿವಾದಗಳಿಂದಲೇ ಸಾಕಷ್ಟು ಸದ್ದು ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ ಎಂದರೆ ತಪ್ಪಾಗಲಾರದು.
ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯ ಪ್ರಮಾಣಪತ್ರಗಳನ್ನು ನಕಲಿ ಮಾಡಿದ ಆರೋಪದ ಮೇಲೆ ಪೂಜಾ ವಿರುದ್ಧ ನವದೆಹಲಿಯಲ್ಲಿ ಯುಪಿಎಸ್ಸಿ ಪ್ರಕರಣ ದಾಖಲಿಸಿದ್ದು, ಕ್ರಿಮಿನಲ್ ಪ್ರಾಸಿಕ್ಯೂಷನ್ ಸೇರಿದಂತೆ ಆಕೆಯ ವಿರುದ್ಧ ಕ್ರಮಗಳ ಸರಣಿಯನ್ನು ಪ್ರಾರಂಭಿಸಿದೆ. ನಾಗರಿಕ ಸೇವಾ ಪರೀಕ್ಷೆ -2022ರಿಂದ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಲು ಮತ್ತು ಮುಂದಿನ ಪರೀಕ್ಷೆಗಳಿಂದ ಅವರನ್ನು ಡಿಬಾರ್ ಮಾಡಲು ಶೋಕಾಸ್ ನೋಟಿಸ್ ನೀಡಿದೆ.
ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಉದ್ಧಟತನದ ಹೇಳಿಕೆ; ವೈರಲ್ ಆಗುತ್ತಿದೆ #UnistallPhonePe ಅಭಿಯಾನ
ಈ ಬಗ್ಗೆ ಪೂಜಾ ಖೇಡ್ಕರ್ ಪ್ರತಿಕ್ರಿಯಿಸಿದ್ದು, ಏನೇ ಆದರೂ ಕಾನೂನು ನೋಡಿಕೊಳ್ಳುತ್ತದೆ. ನನ್ನ ವಿರುದ್ಧ ಬಂದಿರುವ ಆರೋಪಗಳನ್ನು ನಾನೇ ಪರಿಹರಿಸಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಪೂಜಾ ಖೇಡ್ಕರ್ ಹೇಳಿದ್ದಾರೆ.
ಮಹಾರಾಷ್ಟ್ರ ಕೇಡರ್‌ನ 2022 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಖೇಡ್ಕರ್, ಮಹಾರಾಷ್ಟ್ರದ ಪುಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತನ್ನ ತರಬೇತಿಯ ಸಮಯದಲ್ಲಿ ತನಗೆ ಅರ್ಹವಲ್ಲದ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ಬೇಡಿಕೆಯಿಡುವ ಮೂಲಕ ತನ್ನ ಅಧಿಕಾರ ಮತ್ತು ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿದ್ದಾರೆ. ಇದಲ್ಲದೆ ತಮ್ಮ ಖಾಸಗಿ ವಾಹನದ ಮೇಲೆ ಮಹಾರಾಷ್ಟ್ರದ ಸರ್ಕಾರ ಎಂದು ಬರೆಸಿದ್ದು, ಅದರ ಮೇಲೆ ಕೆಂಪು ದೀಓಪವನ್ನು ಹಾಕಿಸಿದ್ದಾರೆ. ಇದಲ್ಲದೆ ಇವರ ತಂದೆ-ತಾಯಿ ಕೂಡ ಮಗಳ ಹೆಸರೇಳಿಕೊಂಡು ದರ್ಪ ಮೆರೆದಿದ್ದಾರೆ.