

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಖಾತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಟಾರ್ ಕಲಾವಿದರ ಹೆಸರಲ್ಲಿ ಸಾಕಷ್ಟು ಫೇಕ್ ಅಕೌಂಟ್ಗಳನ್ನು ತೆರೆಯುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಇದರಿಂದ ಸ್ಟಾರ್ ನಟರು ಮುಜುಗರಕ್ಕೀಡಾದ ಉದಾಹರಣೆಗಳೂ ನಡೆದಿವೆ. ಇದೀಗ, ನವರಸ ನಾಯಕ ಜಗ್ಗೇಶ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿದ್ದು, ಇದು ಜಗ್ಗೇಶ್ ಅವರ ಗಮನಕ್ಕೂ ಬಂದಿದೆ. ಅಷ್ಟೇ ಅಲ್ಲ, ಹಾಗೆ ಮಾಡಿದವರಿಗೆ ಬಿಸಿಯನ್ನೂ ಮುಟ್ಟಿಸಲಾಗಿದೆ.
‘ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ನನ್ನ ಮನಃಸಾಕ್ಷಿ ಅರಿತು ಈ ಮಾತು ಹೇಳುತ್ತಿದ್ದೇನೆ. ಕರ್ನಾಟಕ ಮತ್ತು ಕನ್ನಡಕ್ಕಿಂತ ಹೆಚ್ಚಾಗಿ ಯಾವುದೂ ಇಲ್ಲ, ಯಾರು ಇಲ್ಲ. ಆದರೆ ರಾಜಕೀಯ ಮತ್ತು ಪಕ್ಷ ಮತ್ತು ಐಟಿ ಈಡಿಗೆ ಹೆದರಿ ಬಹಳಷ್ಟು ನಟರುಗಳ ಹಾಗೆ ನಾನು ಮೂಕನಾಗಬೇಕಾಯಿತು ಕ್ಷಮಿಸಿ’ ಎಂದು ಫೇಕ್ ಖಾತೆಯಿಂದ ಟ್ವಿಟ್ ಮಾಡಲಾಗಿದ್ದು, ಈ ವಿಚಾರ ಜಗ್ಗೇಶ್ ಗಮನಕ್ಕೆ ಬಂದಿದ್ದೇ ತಡ, ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.
‘Online complaint ಕೊಟ್ಟಿರುವೆ. ಈ ರೀತಿಯ ಯತ್ನಗಳಿಗೆ ನಾನು ಹೆದರುವುದಿಲ್ಲ. ನನ್ನ ಅಭಿಮಾನಿಗಳು ನಂಬುವುದಿಲ್ಲ. ನಿಮ್ಮ ಕಾರ್ಯ ನೀವು ಮುಂದುವರಿಸಿ ನಮ್ಮ ಕಾರ್ಯ ನಾವು ಮಾಡುತ್ತೇವೆ. ಒಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಮಜವಾಗಿದೆ. best of luck ಭೇಟಿಯಾಗುವ’ ಎಂದು ದೂರು ನೀಡಿದ ಬಗ್ಗೆ ಟ್ವಿಟರ್ನಲ್ಲಿ ವಾಟ್ಸಾಪ್ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ.