

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಗೋವಿಂದ ಗೋಪಾಲ', "ಕಾಸು ಇದ್ದೋನೆ ಬಾಸು' ಸೇರಿ ಕೆಲವು ಚಿತ್ರಗಳಲ್ಲಿ ಜಗ್ಗೇಶ್ ಮತ್ತು ಕೋಮಲ್ ಕುಮಾರ್ ಸಹೋದರರು ಒಟ್ಟಿಗೆ ನಟಿಸಿದ್ದಾರೆ. ಇದೀಗ ಕೆಲ ವರ್ಷಗಳ ಕಾಲ ಬ್ರೇಕ್ ಪಡೆದಿದ್ದ ಕೋಮಲ್, "ಉಂಡೆನಾಮ' ಮತ್ತು "ನಮೋ ಭೂತಾತ್ಮ 2' ಚಿತ್ರಗಳ ಮೂಲಕ ವಾಪಸ್ಸಾಗಿದ್ದಾರೆ. "ಕಾಲಾಯ ನಮಃ' ಎಂಬ ಚಿತ್ರವನ್ನು ತಮ್ಮ ಬ್ಯಾನರ್ನಲ್ಲಿಯೇ ನಿರ್ಮಿಸುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ಕೋಮಲ್ ಜತೆ ಜಗ್ಗೇಶ್ ಕೂಡ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೆ ಜಾಲಿವುಡ್ ಸ್ಟುಡಿಯೋಸ್ನಲ್ಲಿ ಸಹೋದರರ ಭಾಗದ ಶೂಟಿಂಗ್ ನಡೆಸಲಾಯಿತು.
ನಟ ಜಗ್ಗೇಶ್, "ಕೋಮಲ್ ಅದ್ಭುತ ಕಲಾವಿದ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾನು, ಕೋಮಲ್ ಮತ್ತು ನನ್ನ ಮಗ ಯತಿರಾಜ್ ಮೂರೂ ಜನ ನಟಿಸುತ್ತಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಚಿತ್ರಗಳು ಯಶಸ್ವಿಯಾಗುತ್ತಿವೆ. "ಕಾಲಾಯ ನಮಃ' ಕೂಡ ಅದೇ ಸಾಲಿಗೆ ಸೇರಲಿ' ಎಂದು ಶುಭಹಾರೈಸಿದರು. ಕೋಮಲ್, "ಈಗ ಹಾಡಿನ ಶೂಟಿಂಗ್ ನಡೆಯುತ್ತಿದ್ದು ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಅಂದುಕೊಂಡಂತೆ ಆದರೆ ಅಕ್ಟೋಬರ್ ಅಥವಾ ನವೆಂಬರ್ಗೆ ರಿಲೀಸ್' ಎಂದು ಮಾಹಿತಿ ನೀಡಿದರು.
ಮತಿವಣ್ಣನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, "ಟೈಟಲ್ ಹೇಳುವಂತೆ ಇದು ಸಮಯದ ಸುತ್ತ ನಡೆಯುವ ಕಥೆ' ಎಂದು ಹೇಳಿಕೊಂಡರು. ಕೋಮಲ್ಗೆ ಆಸಿಯಾ ಫಿದೋರ್ಸ್ ನಾಯಕಿಯಾಗಿದ್ದು, ಜಗ್ಗೇಶ್ ಜತೆ ಪ್ರಕಾಶ್ ರಾಜ್, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ.