

ಹಾಂಗ್ಝೌ: ‘ಅಬ್ ಕಿ ಬಾರ್, ಸೌ ಪಾರ್’ (ಈ ಬಾರಿ ನೂರರ ಆಚೆ) ಎಂಬ ಟಾರ್ಗೆಟ್ನೊಂದಿಗೆ ಏಷ್ಯನ್ ಗೇಮ್ಸ್ 19ನೇ ಆವೃತ್ತಿಯನ್ನು ಆರಂಭಿಸಿದ ಭಾರತ ತನ್ನ ಗುರಿಯನ್ನು ಮುಟ್ಟುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಚೀನಾದ ತೈಪೈ ತಂಡದ ವಿರುದ್ಧ ಭಾರತದ ಮಹಿಳಾ ಕಬಡ್ಡಿ ತಂಡ ಫೈನಲ್ನಲ್ಲಿ ಗೆದ್ದು, ಚಿನ್ನದ ಪದಕಕ್ಕೆ ಮುತ್ತಿಕುವುದರೊಂದಿಗೆ ಭಾರತ 100 ಪದಕಗಳ ಗುರಿಯನ್ನು ಮುಟ್ಟಿತು.
ನಿನ್ನೆ 95 ಪದಕಗಳೊಂದಿಗೆ ಆಟ ಮುಗಿಸಿದ್ದ ಭಾರತ ಇಂದು ಆರ್ಚರಿ ಸ್ಪರ್ಧೆಯಲ್ಲಿ 4 ಮತ್ತು ಕಬಡ್ಡಿಯಲ್ಲಿ 1 ಪದಕವನ್ನು ಗಳಿಸಿದೆ. ಇದೇ ಮೊದಲ ಬಾರಿಗೆ ಭಾರತ ನೂರು ಪದಕಗಳ ಗುರಿಯನ್ನು ಮುಟ್ಟಿದೆ. ಆರ್ಚರಿ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತಕ್ಕೆ ಲಭಿಸಿದೆ. ಮಧ್ಯಾಹ್ನ 12.30ರಿಂದ ಪುರುಷರ ವಿಭಾಗದಲ್ಲಿ ಇರಾನ್ ವಿರುದ್ಧ ಫೈನಲ್ ಕಬಡ್ಡಿ ಸ್ಪರ್ಧೆ ನಡೆಯಲಿದೆ. ಅಲ್ಲದೆ, ಬೆಳಗ್ಗೆ 11.30ರಿಂದ ಪುರುಷರ ವಿಭಾಗದ ಕ್ರಿಕೆಟ್ನಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧ ಫೈನಲ್ನಲ್ಲಿ ಸೆಣಸಾಡಲಿದೆ. ಹಾಕಿ, ಚೆಸ್ ಮತ್ತು ಬ್ಯಾಡ್ಮಿಂಟನ್ನಿಂದ ತಲಾ ಒಂದೊಂದು ಪದಕ ಖಚಿತವಾಗಿದೆ. ಈ ಬಾರಿ ನೂರಕ್ಕಿಂತ ಹೆಚ್ಚು ಪದಕಗಳು ಖಚಿತವಾಗಿದೆ.
ಇಂದು ಬೆಳಗ್ಗೆ 6.30ಕ್ಕೆ ನಡೆದ ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಜ್ಯೋತಿ ಸುರೇಖಾ ಅವರು ದಕ್ಷಿಣ ಕೊರಿಯಾದ ಸೊ ಚೇವನ್ ಅವರನ್ನು 149-145 ಸ್ಕೋರ್ನಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅದೇ ರೀತಿ ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಅದಿತಿ ಗೋಪಿಚಂದ್ ಅವರು ಇಂಡೋನೇಷ್ಯಾದ ಜಿಲಿಝತ್ ಫಡ್ಲಿಯನ್ನು 146-140 ಸ್ಕೋರ್ನಿಂದ ಮಣಿಸಿ ಕಂಚಿನ ಪದಕ ಜಯಿಸಿದರು.
ಬೆಳಗ್ಗೆ 7.10ಕ್ಕೆ ನಡೆದ ಪುರುಷರ ಕಂಪೌಂಡ್ ಆರ್ಚರಿ ವಿಭಾಗ ಚಿನ್ನ-ಬೆಳ್ಳಿಗೆ ಅಭಿಷೇಕ್ ವರ್ಮ ಮತ್ತು ಓಜಸ್ ಡಿಯೋಟಾಲ್ ಕಾದಾಟ ನಡೆಸಿದರು. ಇದರಲ್ಲಿ ಓಜಸ್ ಡಿಯೋಟಾಲ್ ಚಿನ್ನ ಪದಕ ಗಳಿಸಿದರೆ, ಅಭಿಷೇಕ್ ವರ್ಮ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಓಜಸ್ 2023ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಭಾರತ ಏಷ್ಯಾಡ್ ಇತಿಹಾಸದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ಪದಕ ಗೆಲುವಿನ ದಾಖಲೆ ನಿರ್ಮಿಸಿದೆ. 2018ರಲ್ಲಿ 70 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆ ಆಗಿತ್ತು. ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದೆ. ಆದರೆ ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ. (ಏಜೆನ್ಸೀಸ್)