ಹುಡುಗಿಯರಿಗೆ ಇದು ಸುಲಭ, ಹುಡುಗರ ಬಗ್ಗೆ ಯೋಚಿಸಿದ್ರೆ ಅಯ್ಯೋ ಪಾಪ ಅನ್ಸುತ್ತೆ ಎಂದ ನಿತ್ಯಾ ಮೆನನ್!​

Nithya Menen
Published on

ಚೆನ್ನೈ: ನಟಿ ನಿತ್ಯಾ ಮೆನನ್​ ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್​, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿತ್ಯಾ ಸದಾ ಸಕ್ರಿಯರಾಗಿದ್ದಾರೆ. ಯಾವುದೇ ವಿಚಾರವನ್ನು ಮುಕ್ತವಾಗಿ ಹಂಚಿಕೊಳ್ಳುವ ಸ್ವಭಾವ ಹೊಂದಿರುವ ನಿತ್ಯಾ, ಇತ್ತೀಚಿನ ಸಂದರ್ಶನವೊಂದರಲ್ಲಿ ಹುಡುಗಿಯರು ಮತ್ತು ಹುಡುಗರ ನಡುವಿನ ಒಂದು ವ್ಯತ್ಯಾಸವನ್ನು ಹೇಳುವ ಮೂಲಕ ಹುಡುಗರ ಮೇಲೆ ನಿತ್ಯಾ ಅನುಕಂಪ ತೋರಿದ್ದಾರೆ.

ನಿತ್ಯಾ ಏನು ಹೇಳಿದರು ಎಂಬುದನ್ನು ನೋಡುವುದಾದರೆ, ನನಗೆ ಪುರುಷರನ್ನು ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ. ಏಕೆಂದರೆ, ಅವರು ಸುಲಭವಾಗಿ ಅಳಲು ಸಾಧ್ಯವಿಲ್ಲ. ಗಂಡಸರು ಅಳಬಾರದು ಅಂತಾ ಚಿಕ್ಕಂದಿನಿಂದಲೂ ಹೇಳಿ ಹೇಳಿ ಹಾಗೇ ಬೆಳೆಸಿಬಿಟ್ಟಿದ್ದಾರೆ. ಹೀಗಾಗಿ ಹೆಚ್ಚಾಗಿ ಗಂಡಸಲು ಅಳುವುದಿಲ್ಲ. ಆದರೆ, ಹುಡುಗಿಯರು ಸುಲಭವಾಗಿ ಅತ್ತುಬಿಡುತ್ತಾರೆ ಎಂದು ನಿತ್ಯಾ ಹೇಳಿದರು.

ಮಾತು ಮುಂದುವರಿಸಿದ ನಿತ್ಯಾ, ಸಾಮಾನ್ಯವಾಗಿ ಅಳು ಒಳ್ಳೆಯ ಔಷಧವಾಗಿದೆ. ಅಳುವ ಮೂಲಕ ನಿಮ್ಮ ತಲೆಯಲ್ಲಿರುವ ಎಲ್ಲ ಒತ್ತಡಗಳನ್ನು ಸುಲಭವಾಗಿ ಹೊರಹಾಕಬಹುದು. ಇದರಿಂದ ಎಲ್ಲ ನೋವು ಕಡಿಮೆಯಾಗಿ ನೆಮ್ಮದಿಯ ಅನುಭವವಾಗುತ್ತದೆ. ಯಾವಾಗ ನಿಮ್ಮ ಒತ್ತಡಗಳು ಕರಗಿ ಹೋಗುತ್ತವೆಯೋ ಆಗ ಮುಂದಿನ ಕೆಲಸಕ್ಕೆ ಅಣಿಯಾಬಹುದು ಎಂದರು.

ಹೆಂಗಸರು ಅಳುವುದು ತುಂಬಾ ಸುಲಭ. ಆದರೆ, ಗಂಡಸರು ಅಳಬೇಕು ಅಂತಾ ಅಂದುಕೊಂಡರೂ ಅಳಲಾಗದು ಎಂಬ ಕಾರಣಕ್ಕೆ ಅವರ ಬಗ್ಗೆ ಹೆಚ್ಚು ಯೋಚಿಸಿದಾಗ ನನಗೆ ಅಯ್ಯೋ ಪಾಪ ಅನಿಸುತ್ತದೆ ಎಂದು ನಿತ್ಯಾ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ತಿರುಚಿತ್ರಂಬಲಂ ಸಿನಿಮಾ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮತ್ತೆ ಧನುಷ್​ ಜಯೆ ರಾಯನ್​ ಹೆಸರಿನ ಸಿನಿಮಾದಲ್ಲಿ ನಿತ್ಯಾ ನಟಿಸುತ್ತಿದ್ದಾರೆ. ರಾಯನ್​ ಸಿನಿಮಾ ಧನುಷ್​ ಅವರ 50ನೇ ಸಿನಿಮಾ ಮತ್ತು ಈ ಚಿತ್ರವನ್ನು ಸ್ವತಃ ಅವರೇ ನಿರ್ದೇಶನ ಮಾಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net