

ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಕದನ ಕಾರ್ಮೋಡ ತಿಳಿಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಹಮಾಸ್ ಉಗ್ರರ ಮೇಲಿನ ಪ್ರತೀಕಾರದ ದಾಳಿಯನ್ನು ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್)ಗಳು ತೀವ್ರಗೊಳಿಸಿವೆ. ಹಮಾಸ್ ಅನ್ನು ಸಂಪೂರ್ಣ ನಾಶ ಮಾಡುವವರೆಗೂ ನಾವು ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸ್ಪಷ್ಟವಾಗಿ ಹೇಳಿದ್ದಾರೆ. ಈವರೆಗೂ ಹಮಾಸ್ ಸಂಘಟನೆಯ ಏಳು ಹಿರಿಯ ನಾಯಕರನ್ನು ಕೊಂದಿರುವ ಇಸ್ರೇಲ್ ಪಡೆ, ಉಳಿದ ಪ್ರಮುಖ ಐವರು ಹಮಾಸ್ ನಾಯಕರ ಮೇಲೆ ಗುರಿ ಇಟ್ಟಿದೆ.
ಇಸ್ರೇಲ್ ಪಡೆ ಗುರಿಯಿಟ್ಟಿರುವ ಹಮಾಸ್ ಗುಂಪಿನ ಪ್ರಮುಖ ನಾಯಕರು ಯಾರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
ಇಸ್ಮಾಯಿಲ್ ಹನಿಯೆಹ್
ಈ ಇಸ್ಮಾಯಿಲ್ ಹನಿಯೆಹ್ ಪ್ಯಾಲೆಸ್ತೀನ್ನ ಪ್ರಮುಖ ರಾಜಕೀಯ ವ್ಯಕ್ತಿ. ಈತ ಗಾಜಾ ನಗರದ ಎಐ-ಶತಿ ನಿರಾಶ್ರಿತರ ಶಿಬಿರದಲ್ಲಿ 1963ರ ಜನವರಿ 29ರಂದು ಜನಿಸಿದ. ಪ್ಯಾಲೆಸ್ತೀನಿಯನ್ ಇಸ್ಲಾಮಿಸ್ಟ್ ರಾಜಕೀಯ ಸಂಘಟನೆ ಮತ್ತು ಭಯೋತ್ಪಾದಕ ಗುಂಪಾಗಿರುವ ಹಮಾಸ್ನ ಹಿರಿಯ ನಾಯಕನಾಗಿದ್ದು, ಇಸ್ರೇಲ್ ಪಡೆಗಳು ಪ್ರಮುಖ ಟಾರ್ಗೆಟ್ ಆಗಿದ್ದಾನೆ.
ಮೊಹಮ್ಮದ್ ಡೀಫ್
ಮೊಹಮ್ಮದ್ ಡೀಫ್ ಹಮಾಸ್ನ ಹಿರಿಯ ನಾಯಕ. ಈತ ಹಮಾಸ್ನ ಮಿಲಿಟರಿ ನಾಯಕ ಎಂದು ವ್ಯಾಪಕವಾಗಿ ಪರಿಚಿತನಾಗಿದ್ದಾನೆ ಮತ್ತು ಸಂಘಟನೆಯ ಸಶಸ್ತ್ರ ವಿಭಾಗವಾದ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ನಲ್ಲಿ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಹಮಾಸ್ ಮಿಲಿಟರಿ ಚಟುವಟಿಕೆಯಲ್ಲಿ ಕೇಂದ್ರ ವ್ಯಕ್ತಿಯಾಗಿರುವ ಡೀಫ್, ಇಸ್ರೇಲ್ ವಿರುದ್ಧ ಪ್ಲ್ಯಾನಿಂಗ್ ಮತ್ತು ಕಾರ್ಯಾಚರಣೆ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಹಮಾಸ್ನ ಸಶಸ್ತ್ರ ಚಟುವಟಿಕೆಗಳಲ್ಲಿ ಈತನ ಪಾತ್ರ ಮತ್ತು ಇಸ್ರೇಲಿ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಯ ವಿರುದ್ಧ ದಾಳಿಗಳನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರಿಂದ ಈತನನ್ನು ಹತ್ಯೆ ಮಾಡಲು ಇಸ್ರೇಲಿ ಪಡೆಯು ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದಾಗ್ಯೂ, ಪ್ರತಿ ಬಾರಿ ಯಾವುದೋ ಒಂದು ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ.
ಮರ್ವಾನ್ ಇಸಾ
ಮರ್ವಾನ್ ಇಸಾ, ಮೊಹಮ್ಮದ್ ಡೀಫ್ನ ಬಲಗೈ ಬಂಟ ಎನ್ನಲಾಗಿದೆ. ಹಮಾಸ್ನ ಹಿರಿಯ ಸದಸ್ಯನಾಗಿರುವ ಮರ್ವಾನ್ ಇಸಾ, ವಿಶೇಷವಾಗಿ ಮಿಲಿಟರಿ ವಿಭಾಗವಾದ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ ಒಳಗೆ ಪ್ರಮುಖ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾನೆ. ಹಮಾಸ್ ಸಂಘಟನೆಯಲ್ಲಿ ಇಸಾ, ಉನ್ನತ ಶ್ರೇಣಿಯ ಸ್ಥಾನವನ್ನು ಹೊಂದಿದ್ದಾನೆಂದು ನಂಬಲಾಗಿದೆ. ಈ ಸ್ಥಾನವನ್ನು ಸಾಮಾನ್ಯವಾಗಿ ಇಝ್ ಅಡ್-ದಿನ್ ಅಲ್-ಕಸ್ಸಮ್ ಬ್ರಿಗೇಡ್ಗಳ ಉಪ ಕಮಾಂಡರ್ ಎಂದು ಹೇಳಲಾಗಿದೆ. ಇಸ್ರೇಲ್ ವಿರುದ್ಧದ ಕಾರ್ಯಾಚರಣೆಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ತೊಡಗಿಸಿಕೊಂಡಿರುವ ಹಮಾಸ್ನೊಳಗಿನ ಮಹತ್ವದ ಮಿಲಿಟರಿ ತಂತ್ರಜ್ಞ ಮತ್ತು ಆಪರೇಟಿವ್ ಎಂದು ಈತನನ್ನು ಪರಿಗಣಿಸಲಾಗಿದೆ.
ಯಾಹ್ಯಾ ಸಿನ್ವಾರ್
ಈ ಯಾಹ್ಯಾ ಸಿನ್ವಾರ್ ಹಮಾಸ್ ಮತ್ತೊಬ್ಬ ಉನ್ನತ ನಾಯಕ. ಈತ ದಕ್ಷಿಣ ಗಾಜಾ ಪೆಟ್ಟಿಯ ಖಾನ್ ಯೂನಿಸ್ನಲ್ಲಿ 1962ರ ಜುಲೈ 29ರಂದು ಜನಿಸಿದ. ಸಿನ್ವಾರ್, ಹಮಾಸ್ನಲ್ಲಿ ನಾಯಕತ್ವದ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾನೆ. 2017ರ ಫೆಬ್ರವರಿಯಲ್ಲಿ ಇಸ್ಮಾಯಿಲ್ ಹನಿಯೆಹ್ನ ಉತ್ತರಾಧಿಕಾರಿಯಾಗಿ ಗಾಜಾ ಪಟ್ಟಿಯಲ್ಲಿ ಹಮಾಸ್ ರಾಜಕೀಯ ಬ್ಯೂರೋದ ಮುಖ್ಯಸ್ಥನಾಗಿ ಆಯ್ಕೆಯಾದನು. ರಾಜಕೀಯ ಪಾತ್ರಕ್ಕೂ ಮುಂಚಿತವಾಗಿ ಹಮಾಸ್ನ ಸಶಸ್ತ್ರ ವಿಭಾಗವಾದ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ನ ಹಿರಿಯ ಸದಸ್ಯನಾಗಿದ್ದನು ಮತ್ತು ಇಸ್ರೇಲ್ ವಿರುದ್ಧ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಖ್ಯಾತಿಯನ್ನು ಹೊಂದಿದ್ದನು. ಈ ಸಿನ್ವಾರ್, 2011 ರಲ್ಲಿ ಗಿಲಾಡ್ ಶಾಲಿತ್ ಖೈದಿಗಳ ವಿನಿಮಯದಲ್ಲಿ ಬಿಡುಗಡೆಯಾಗುವ ಮೊದಲು ಇಸ್ರೇಲಿ ಜೈಲುಗಳಲ್ಲಿ ಹಲವು ವರ್ಷಗಳು ಕಾಲ ಕಳೆದಿದ್ದನು. ಇಸ್ರೇಲ್ ವಿರುದ್ಧ ಕಠಿಣ ನಿಲುವಿಗೆ ಹೆಸರುವಾಸಿಯಾಗಿರುವ ಸಿನ್ವಾರ್, ಗಾಜಾ ಪಟ್ಟಿಯಲ್ಲಿ ಹಮಾಸ್ನ ಮಿಲಿಟರಿ ಮತ್ತು ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾನೆ.
ಅಬ್ದುಲ್ಲಾ ಬರ್ಘೌತಿ
ಅಬ್ದುಲ್ಲಾ ಬರ್ಘೌತಿ ಓರ್ವ ಪ್ಯಾಲೆಸ್ತೀನಿಯನ್ ಉಗ್ರಗಾಮಿ ಮತ್ತು ಹಮಾಸ್ಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದಕ. ವೆಸ್ಟ್ ಬ್ಯಾಂಕ್ನಲ್ಲಿ ಜನಸಿದ ಬರ್ಘೌತಿ, ಹಮಾಸ್ನಲ್ಲಿ ಪ್ರಖ್ಯಾತ ಬಾಂಬ್ ತಯಾರಿಕನಾಗಿ ಹೆಸರು ಗಳಿಸಿದ್ದಾನೆ. ಅನೇಕ ಭಯೋತ್ಪಾದಕ ದಾಳಿಗಳಿಗೆ ಅದರಲ್ಲೂ ನಿರ್ದಿಷ್ಟವಾಗಿ ಆತ್ಮಹತ್ಯಾ ಬಾಂಬ್ ದಾಳಿಗಳಿಗೆ ಹೆಸರುವಾಗಿ. ಈತ ಅನೇಕ ಮುಗ್ಧ ನಾಗರಿಕರ ಸಾವಿಗೆ ಕಾರಣವಾದ ಅಪರಾಧಿಯಾಗಿದ್ದು, ಶಿಕ್ಷೆಗೂ ಗುರಿಯಾಗಿದ್ದಾನೆ. ಬರ್ಘೌತಿಯನ್ನು ಹಮಾಸ್ ಮದ್ದುಗುಂಡುಗಳ ಹಿಂದಿನ ಪ್ರಮುಖ ವ್ಯಕ್ತಿ ಮತ್ತು ಹಮಾಸ್ನ ಬಾಂಬ್ ತಯಾರಕ ಎಂದು ಕರೆಯುತ್ತಾರೆ. ಅಲ್ಲದೆ, 'ಪ್ರಿನ್ಸ್ ಆಫ್ ಶ್ಯಾಡೋ' ಎಂದೂ ಕರೆಯುತ್ತಾರೆ. (ಏಜೆನ್ಸೀಸ್)