Israeli Attacks Iran: ಅತ್ತ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಮಾಸುವ ಮುನ್ನವೇ ಇತ್ತ ಇರಾನ್ ಮತ್ತು ಇಸ್ರೇಲ್ ನಡುವೆ ಸೇಡಿನ ಕಿಡಿ ಹೊತ್ತು ಉರಿಯುತ್ತಿದೆ. ಇಂದು (ಜೂ.13) ಬೆಳಗ್ಗೆ ರಾಜಧಾನಿ ಟೆಹ್ರಾನ್ ಮೇಲೆ ವಾಯುದಾಳಿ ನಡೆಸಿದ ಇಸ್ರೇಲ್, ಇರಾನ್‌ನ ಸೇನಾ ಮುಖ್ಯಸ್ಥ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನೇ ಹೊಡೆದುರಳಿಸಿದೆ. ಈ ಮೂಲಕ ತನ್ನ ಪ್ರತೀಕಾರದ ಕಿಚ್ಚಿಗೆ ದಾರಿಯಾಗಿದೆ.
ಇದನ್ನೂ ಓದಿ: ಒಂದೇ ವಾರದಲ್ಲಿ ನಿಜವಾಯ್ತು ವಿಮಾನ ಪತನದ ಭವಿಷ್ಯವಾಣಿ: ಜಾಲತಾಣದಲ್ಲಿ ಸಂಚಲನ ಮೂಡಿಸಿದ ಶರ್ಮಿಷ್ಠಾ! Ahmedabad Plane Crash
ವೈಮಾನಿಕ ದಾಳಿ
ಪ್ರತೀಕಾರ ತೀರಿಸಿಕೊಳ್ಳಲು ತುದಿಗಾಲಿನಲ್ಲಿದ್ದ ಇಸ್ರೇಲ್, ಇರಾನ್ ಮೇಲೆ ಬಾಂಬ್‌ಗಳ ಮಳೆ ಸುರಿಸಿತು. ಇಂದು ಮುಂಜಾನೆ ರಾಜಧಾನಿ ಟೆಹ್ರಾನ್ ಮೇಲೆ ಕ್ಷಿಪಣಿಗಳ ದಾಳಿ ಹಾಗೂ ಬಾಂಬ್‌ಗಳ ಮಳೆ ಸುರಿಸಿದ ಇಸ್ರೇಲಿ ಪಡೆ, ಇರಾನ್‌ನ ಪರಮಾಣು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿತು. ಈ ದಾಳಿಗಳಲ್ಲಿ ಇರಾನ್ ಮಿಲಿಟರಿ ಮುಖ್ಯಸ್ಥರಾಗಿದ್ದ ಮೊಹಮ್ಮದ್ ಬಘೇರಿ ಸಾವನ್ನಪ್ಪಿದರೆ, ಆರು ಇರಾನಿನ ಪರಮಾಣು ವಿಜ್ಞಾನಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರಾಜ್ಯ ಮಾಧ್ಯಮ ಸಂಸ್ಥೆ ಐಆರ್‌ಎನ್‌ಎನ್ ದೃಢಪಡಿಸಿದೆ.
ಇವರೊಂದಿಗೆ ಸೇನೆಯ ಹಿರಿಯ ಅಧಿಕಾರಿಗಳೂ ಜೀವ ಬಿಟ್ಟಿದ್ದಾರೆ. ಮೃತರಲ್ಲಿ ಐಆರ್‌ಜಿಸಿ ಮುಖ್ಯಸ್ಥ ಹೊಸೈನ್ ಸಲಾಮಿ ಕೂಡ ಒಬ್ಬರು. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಪ್ರತಿಕ್ರಿಯಿಸಿ, “ಪ್ರತೀಕಾರದ ಎಚ್ಚರಿಕೆ ರವಾನಿಸಿದ್ದಾರೆ. ಇಸ್ರೇಲ್‌ಗೆ ಕಠಿಣ ಶಿಕ್ಷೆ ವಿಧಿಸಲಾಗುವುದು” ಎಂದು ಶಪಥದ ಮಾತುಗಳನ್ನಾಡಿದ್ದಾರೆ. ಇರಾನ್‌ನ ನಟಾಂಜ್ ಪರಮಾಣು ಪುಷ್ಟೀಕರಣ ಕೇಂದ್ರವು ಇಸ್ರೇಲ್ ದಾಳಿಯಲ್ಲಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ನಾನು ಬದುಕಿದ್ದು ಹೇಗೆ ಗೊತ್ತಾ? ಕೊನೇ ಕ್ಷಣದಲ್ಲಿ ನಡೆದ ಮಹಾಪವಾಡ ಬಿಚ್ಚಿಟ್ಟ ಮೃತ್ಯುಂಜಯ ರಮೇಶ್! Ahmedabad Plane Crash
ಇರಾನ್ ಮೇಲಿನ ದಾಳಿಗೆ ಅಮೆರಿಕ ಪ್ರತಿಕ್ರಿಯೆ
ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ, “ಈ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದೆ. “ಇಸ್ರೇಲ್ ಏಕಪಕ್ಷೀಯವಾಗಿ ಇರಾನ್ ವಿರುದ್ಧ ಕ್ರಮಗಳನ್ನು ಕೈಗೊಂಡಿದೆ. ಈ ದಾಳಿಗಳಲ್ಲಿ ಅಮೆರಿಕದ ಪಾಲು ಇಲ್ಲ. ಈ ಪ್ರದೇಶದಲ್ಲಿ ಅಮೆರಿಕದ ಪಡೆಗಳನ್ನು ರಕ್ಷಿಸುವತ್ತ ಮಾತ್ರ ನಮ್ಮ ಗಮನವಿದೆ” ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಒತ್ತಿ ಹೇಳಿದ್ದಾರೆ. ಆದಾಗ್ಯೂ, ಯುಎಸ್ ಪಾಲಿಲ್ಲದೆ ಇಸ್ರೇಲ್ ಈ ದಾಳಿಗಳನ್ನು ನಡೆಸುವುದಿಲ್ಲ ಎಂದು ಇರಾನ್ ಆರೋಪಿಸಿದೆ. ಘೋರ ದಾಳಿಗೆ ಅಮೆರಿಕವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ,(ಏಜೆನ್ಸೀಸ್).