

ನವದೆಹಲಿ: ಹಮಾಸ್ ಉಗ್ರರ ದಾಳಿ ಆರಂಭವಾಗಿ ನಾಲ್ಕನೇ ದಿನ ತಲುಪಿದ್ದರೂ ಇಸ್ರೇಲ್ನಲ್ಲಿ ಉಂಟಾಗಿರುವ ರಣಭೀಕರ ಪರಿಸ್ಥಿತಿ ಇನ್ನೂ ಶಮನವಾಗಿಲ್ಲ. ಬದಲಿಗೆ ನಿತ್ಯವೂ ಯುದ್ಧೋನ್ಮಾದ ಉಂಟಾಗುತ್ತಿದ್ದು, ದಾಳಿ-ಪ್ರತಿದಾಳಿಗೆ ಹೆಣಗಳು ಬೀಳಲಾರಂಭಿಸಿವೆ.
ಇಸ್ರೇಲ್ ಯುದ್ಧವನ್ನು ಘೋಷಿಸಿ ಹಮಾಸ್ ಉಗ್ರರ ಮೇಲೆ ಪ್ರತೀಕಾರಕ್ಕೆ ಮುಂದಾಗಿದ್ದು, ಹಮಾಸ್ ಉಗ್ರರ ಮಾಸ್ಟರ್ಮೈಂಡ್ ಮನೆಯನ್ನೇ ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದೆ ಎಂಬ ಸಂಗತಿ ವರದಿಯಾಗಿದೆ. ಈ ಕುರಿತಂತೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ.
ಹಮಾಸ್ ಉಗ್ರರ ಈ ದಾಳಿಯ ಮಾಸ್ಟರ್ಮೈಂಡ್ ಎನ್ನಲಾದ ಮೊಹಮ್ಮದ್ ಡೈಫ್ ಎಂಬಾತನ ತಂದೆಯ ಮನೆ ಮೇಲೆ ಇಸ್ರೇಲ್ ರಕ್ಷಣಾ ಪಡೆ ಹಾರಿಸಿದ್ದ ರಾಕೆಟ್ ಬಂದೆರಗಿದೆ. ಗಾಜಾದಲ್ಲಿನ ಈ ಮನೆ ಮೇಲೆ ಬಂದೆರಗಿ ರಾಕೆಟ್ ಮೂರು ಜೀವಗಳನ್ನು ಬಲಿ ಪಡೆದುಕೊಂಡಿದ್ದಲ್ಲದೆ ಮನೆಯನ್ನು ಧ್ವಂಸಗೊಳಿಸಿದೆ.
ಈ ದಾಳಿಯಲ್ಲಿ ಹಮಾಸ್ ಮಿಲಿಟರಿ ಕಮಾಂಡರ್ ಮೊಹಮ್ಮದ್ ಡೈಫ್ನ ಪುತ್ರ, ಸಹೋದರ, ಸಹೋದರನ ಮೊಮ್ಮಗಳು ಸಾವಿಗೀಡಾಗಿದ್ದಾರೆ. ಮಾತ್ರವಲ್ಲ, ಮನೆ ಧ್ವಂಸಗೊಂಡಿದ್ದು, ಮನೆಯ ಇನ್ನೂ ಕೆಲವು ಸದಸ್ಯರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.