ನವದೆಹಲಿ: ಐಪಿಎಲ್ ಆರಂಭವಾದಾಗಿನಿಂದಲೂ ಇಲ್ಲಿಯವರೆಗೂ ಭಾರತದ ಕ್ರಿಕೆಟ್ ಅಭಿಮಾನಿಗಳು ವಿದೇಶಿ ಆಟಗಾರರ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಡೇವಿಡ್ ವಾರ್ನರ್ ಸೇರಿದಂತೆ ಅನೇಕರ ಹೆಸರು ಮೊದಲಿಗೆ ಕೇಳಿ ಬರುತ್ತದೆ. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಕಂಡರೆ ಭಾರತೀಯರಿಗೆ ವಿಶೇಷ ಅಭಿಮಾನವಿದೆ.
ಬರೀ ಕ್ರಿಕೆಟ್ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚು ಸಕ್ರಿಯರಾಗಿರುವ ಡೇವಿಡ್ ವಾರ್ನರ್ ಆಗಿಂದಾಗೆ ರೀಲ್ಸ್ ಹಾಗೂ ತಮ್ಮ ಪೋಸ್ಟ್ಗಳ ಮೂಲಕ ಜನರನ್ನು ರಂಜಿಸುವಲ್ಲಿ ಮಾತ್ರ ವಿಫಲರಾಗಿಲ್ಲ ಎಂದು ಹೇಳಬಹುದಾಗಿದೆ. ಐಪಿಎಲ್‌ನಲ್ಲಿ ಆನೇಕ ಬಾರಿ ಡೇವಿಡ್ ವಾರ್ನರ್ ಪಂದ್ಯದ ವೇಳೆ ಆಸಕ್ತಿದಾಯಕವಾದ್ದನ್ನು ಮಾಡುತ್ತ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ ಕ್ರಿಕೆಟ್ ಆಟಕ್ಕೆ ಸೀಮಿತವಾಗಿರದ ವಾರ್ನರ್ ಭಾರತೀಯ ಸಿನಿಮಾಗಳು ಮತ್ತು ಸಂಸ್ಕೃತಿಯ ಬಗ್ಗೆ ಸಾಕಷ್ಟು ಪ್ರೀತಿಯನ್ನು ಹೊಂದಿದ್ದು, ಈ ಬಗ್ಗೆ ಹಲವು ಬಾರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಏಪ್ರಿಲ್ 24ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ 40ನೇ ಐಪಿಎಲ್ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದು, ಇದಕ್ಕೂ ಮುನ್ನ ವಾರ್ನರ್ ಅಭಿಮಾನಿ ಜೊತೆಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಮತದಾನಕ್ಕಾಗಿ ರ್‍ಯಾಪಿಡೋ ವತಿಯಿಂದ ಉಚಿತ ಸೇವೆ; ಯಾರೆಲ್ಲಾ ಇದರ ಸೇವೆ ಪಡೆಯಬಹುದು, ಇಲ್ಲಿದೆ ಮಾಹಿತಿ
ವೈರಲ್ ಆಗಿರುವ ವಿಡಿಯೋವನ್ನು ನೋಡುವುದಾದರೆ, ಡೆಲ್ಲಿ ಕ್ಯಾಪಿಟಲ್ಸ್ ಅಭ್ಯಾಸದ ವೇಳೆ ವ್ಯಕ್ತಿಯೊಬ್ಬರು ಡೇವಿಡ್ ವಾರ್ನರ್ ಅವರನ್ನು ಭೇಟಿಯಾಗಿ ಮೊದಲು ಸಿನಿಮಾ ನೋಡಲು ಹೋಗೋಣ ಎಂದು ಕೇಳುತ್ತಾನೆ, ಆಗ ವಾರ್ನರ್ ಆಗುವುದಿಲ್ಲ ಎಂದು ಹೇಳುತ್ತಾರೆ. ಬಳಿಕ ಅಲ್ಲಿ ಸಮಾರಂಭ ನಡೆಯುತ್ತಿದೆ ಊಟ ಮಾಡಲು ಹೋಗೋಣ ಎಂದು ಕೇಳುತ್ತಾನೆ, ವಾರ್ನರ್ ಮತ್ತೆ ಇಲ್ಲ ಎನ್ನುತ್ತಾರೆ.
ನಂತರ ಅಲ್ಲಿ ನೋಡು ಹುಡುಗಿ ಎಷ್ಟು ಸುಂದರವಾಗಿದ್ದಾಳೆ ಎಂದು ಹೇಳುತ್ತಾರೆ. ಅವಾಗಲೂ ವಾರ್ನರ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕೊನೆಯದಾಗಿ ಅಲ್ಲಿ ಆಧಾರ್ ಕಾರ್ಡ್ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಂತೆ ವಾರ್ನರ್ ಆ ವ್ಯಕ್ತಿಯನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ಓಡಿ ಹೋಗಲು ಶುರು ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಾರ್ನರ್ಗೆ ಭಾರತ ದೇಶ ಹಾಗು ಭಾರತೀಯರ ಮೇಲೆ ಎಷ್ಟರ ಮಟ್ಟಿಗೆ ಪ್ರೇಮಾಂಕುರವಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ವಾರ್ನರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದರಲ್ಲಿ ಆಧಾರ್ ಕಾರ್ಡ್ ಪಡೆಯಲು ಅರ್ಹನಾಗಿದ್ದೇನೆ ಎಂದು ಬರೆದುಕೊಂಡಿದ್ದರು. ಭಾರತದಲ್ಲಿ ಕ್ರಿಕೆಟ್ ಆಡುತ್ತಿರುವುದು ನನಗೆ ಆನೇಕ ವಿಷಯಗಳನ್ನು ಪರಿಚಯಿಸಿದೆ. ನಾನು ಮೆಚ್ಚಿದನ್ನು ಪಡೆಯಬೇಕಾದರೆ ಅದು ಭಾರತೀಯ ಸಿನಿಮಾಗಳಾಗಬಹುದು. ಪುಷ್ಪ, ಬಾಹುಬಲಿ, ಆರ್‌ಆರ್‌ಆರ್ ಈ ಅದ್ಭುತ ಚಿತ್ರಗಳನ್ನು ನಾನು ಎಷ್ಟು ಬಾರಿ ನೋಡಿದ್ದೇನೆ ಎಂಬ ಲೆಕ್ಕವನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ನಾನು ಆಧಾರ್ ಕಾರ್ಡ್ ಪಡೆಯಲು ಅರ್ಹ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದರು.