ಇನ್ವೆಸ್ಟ್ ಕರ್ನಾಟಕ 2025ರಲ್ಲಿ "ದಶಕದ ಹೂಡಿಕೆದಾರ" ಪ್ರಶಸ್ತಿಗೆ ಪಾತ್ರವಾದ JSW ಗ್ರೂಪ್

ವಿಜಯವಾಣಿ - 2025-02-13T192811.961
Published on

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್ ಸಂಸ್ಥೆಯು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ "ದಶಕದ ಹೂಡಿಕೆದಾರ" ಎಂಬ (ಇನ್ ವೆಸ್ಟರ್ ಆಫ್ ದ ಡಿಕೇಡ್) ಪ್ರಶಸ್ತಿಗೆ ಪಾತ್ರವಾಗಿದೆ. ಕಳೆದ ಒಂದು ದಶಕದಲ್ಲಿ ಕರ್ನಾಟಕದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಜೆಎಸ್‌ಡಬ್ಲ್ಯೂ ಗ್ರೂಪ್ ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.

ಬೆಂಗಳೂರಿನ ಅರಮನೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಪ್ರತಿಷ್ಠಿತ ದಶಕದ ಹೂಡಿಕೆದಾರ ಪ್ರಶಸ್ತಿಯನ್ನು ಜೆಎಸ್‌ಡಬ್ಲ್ಯೂ ಸಿಮೆಂಟ್ ಮತ್ತು ಜೆಎಸ್‌ಡಬ್ಲ್ಯೂ ಪೇಂಟ್ಸ್​ನ ವ್ಯವಸ್ಥಾಪಕ ನಿರ್ದೇಶಕರಾದ ಪಾರ್ಥ್ ಜಿಂದಾಲ್ ಅವರಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಉದ್ಯಮ ಮುಖಂಡರು ಮತ್ತು ಪ್ರಮುಖ ಉದ್ಯಮ ಪಾಲುದಾರರು ಉಪಸ್ಥಿತರಿದ್ದರು.

ಜೆಎಸ್ಡಬ್ಲ್ಯೂ ಗ್ರೂಪ್ ಕರ್ನಾಟಕದ ಉತ್ಪಾದನಾ ಕ್ಷೇತ್ರ ಬೆಳೆಸುವಲ್ಲಿ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವಲ್ಲಿ ಮತ್ತು ಉದ್ಯೋಗಾವಕಾಶ ಸೃಷ್ಟಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ರಾಜ್ಯದಲ್ಲಿ ಈ ಗ್ರೂಪ್ 1 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ಹೂಡಿಕೆಗಳನ್ನು ಮಾಡಿರುವುದು ವಿಶೇಷವಾಗಿದೆ. ಕಂಪನಿಯು ಉಕ್ಕು ಉತ್ಪಾದನೆ, ಗ್ರೀನ್ ಎನರ್ಜಿ, ಸಿಮೆಂಟ್ ಉತ್ಪಾದನೆ ಮತ್ತು ಬಂದರು ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದು, ಆರ್ಥಿಕ ದೃಢತೆ ಮತ್ತು ದೀರ್ಘಕಾಲೀನ ಅಭಿವೃದ್ಧಿ ಸಾಧಿಸಿದೆ.

ಜೆಎಸ್ಡಬ್ಲ್ಯೂ ಗ್ರೂಪ್ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ನಿಧಾನಕ್ಕೆ ಬೆಳೆಸುತ್ತಾ ಬಂದಿದೆ. ಜೆಎಸ್ಡಬ್ಲ್ಯೂ ಸ್ಟೀಲ್​ನ ವಿಜಯನಗರ ಘಟಕವು ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಉಕ್ಕು ಸಾಮರ್ಥ್ಯ ಹೊಂದಿರುವ ಭಾರತದ ಅತಿದೊಡ್ಡ ಉಕ್ಕಿನ ಸ್ಥಾವರ ಎಂಬ ಖ್ಯಾತಿ ಗಳಿಸಿದೆ. ಜತೆಗೆ ನವೀಕರಿಸಬಹುದಾದ ಶಕ್ತಿ, ಸಿಮೆಂಟ್ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದು, ದೊಡ್ಡ ಮಟ್ಟದ ಸಾಧನೆ ಮಾಡಿದೆ. ಪ್ರಸ್ತುತ ದೊರೆತಿರುವ ಪ್ರಶಸ್ತಿಯು ಕರ್ನಾಟಕವನ್ನು ಕೈಗಾರಿಕಾ ಶ್ರೇಷ್ಠ ರಾಜ್ಯವನ್ನಾಗಿ ರೂಪಿಸುವ ವಿಚಾರದಲ್ಲಿ ಅತ್ಯಂತ ಪ್ರಮುಖ ಕಂಪನಿಯಾಗಿ ಜೆಎಸ್ಡಬ್ಲ್ಯೂನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜೆಎಸ್ಡಬ್ಲ್ಯೂ ಗ್ರೂಪ್ ಕರ್ನಾಟಕ ಮತ್ತು ಭಾರತದಾದ್ಯಂತ ಕೈಗಾರಿಕಾ ಕ್ರಾಂತಿ ನಡೆಸಲು, ಉದ್ಯೋಗ ಸೃಷ್ಟಿಸಲು ಮತ್ತು ಆರ್ಥಿಕ ಅಭಿವೃದ್ಧಿ ಹೆಚ್ಚಿಸಲು ಬದ್ಧವಾಗಿದೆ.

ಚಿತ್ರ ಶೀರ್ಷಿಕೆ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್​ಗೆ ಕರ್ನಾಟಕ ಸರ್ಕಾರವು ಪ್ರತಿಷ್ಠಿತ "ದಶಕದ ಹೂಡಿಕೆದಾರ" ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಜೆಎಸ್‌ಡಬ್ಲ್ಯೂ ಸಿಮೆಂಟ್ ಮತ್ತು ಜೆಎಸ್‌ಡಬ್ಲ್ಯೂ ಪೇಂಟ್ಸ್​ನ ವ್ಯವಸ್ಥಾಪಕ ನಿರ್ದೇಶಕರಾದ ಪಾರ್ಥ್ ಜಿಂದಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net