

Bicycle Bill: ವರ್ಷಗಳು ಉರುಳಿದಂತೆ ಎಲ್ಲವೂ ಬದಲಾಗುತ್ತಲೇ ಹೋಗುತ್ತದೆ. ಇದೊಂದು ರೀತಿ ಜಗದ ನಿಯಮ. ಮನುಷ್ಯನ ನಡುವಳಿಕೆಯಿಂದ ಹಿಡಿದು ಅವನ ಜೀವನ ಶೈಲಿ ಕಾಲ ಕ್ರಮೇಣವಾಗಿ ಹೇಗೆ ಬದಲಾಗುತ್ತದೆಯೋ ಅಂತೆಯೇ ದಿನನಿತ್ಯದ ವಸ್ತುಗಳ ಬೆಲೆಯೂ ಬದಲಾಗುತ್ತದೆ. ಅಸಲಿಗೆ ಪದಾರ್ಥಗಳ ಬೆಲೆ ಗಗನಕ್ಕೆ ಏರಿಕೆ ಆಗುತ್ತದೆಯೇ ವಿನಃ ಕಡಿಮೆಯಂತೂ ಆಗೋದಿಲ್ಲ. ಟೆಲಿಫೋನ್ನಿಂದ ಮೊಬೈಲ್, ಮೊಬೈಲ್ನಿಂದ ಈಗ ಸ್ಮಾರ್ಟ್ಫೋನ್. ಬೀಸಣಿಕೆಯಿಂದ ಟೇಬಲ್ ಫ್ಯಾನ್, ಇಲ್ಲಿಂದ ಈಗ ಸ್ವಯಂಚಾಲಿತ ಎಸಿ. ಆಧುನಿಕ ಎಐ ಟೆಕ್ನಾಲಜಿಯ ಕಾಲಘಟ್ಟವನ್ನು ತಲುಪಿರುವ ನಾವು, ಹಿಂದಿನ ವರುಷಗಳನ್ನು ಇನ್ನು ಕಲ್ಪನೆ ಮಾಡಿಕೊಂಡು ಮೆಲುಕು ಹಾಕಬೇಕಷ್ಟೇ ಹೊರೆತು ಜೀವಿಸಲು ಸಾಧ್ಯವಿಲ್ಲ.
ಕಾಲ ಬದಲಾದಂತೆ ನಮ್ಮ ಜೀವನಶೈಲಿಯಲ್ಲಿ ಆಗುವ ಒಂದಷ್ಟು ವಿಷಯಗಳು ನಮ್ಮನ್ನು ವಿಶೇಷ ಎನ್ನುವಂತೆ ನಮಗೇ ತೋರಿಸುತ್ತದೆ. ಶರವೇಗದಲ್ಲಿ ಸಾಗುತ್ತಿರುವ ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಅಚ್ಚರಿ, ಅದ್ಭುತ ಎನ್ನುವಂತಾಗಿದೆ. ಮೊಬೈಲ್ ಉಪಯೋಗಿಸಲು ಪರದಾಡುತ್ತಿದ್ದವರು ಈಗ ಬಹಳ ಸರಳವಾಗಿ, ಸುಂದರವಾಗಿ ಸ್ಮಾರ್ಟ್ಫೋನ್ ಉಪಯೋಗಿಸುತ್ತಾರೆ. ಅದನ್ನು ತಮ್ಮ ದೈನಂದಿನ ಬದುಕಿನ ಭಾಗವಾಗಿಯೂ ಮಾಡಿಕೊಂಡು ಜೀವಿಸುತ್ತಿರುವುದು ವಿಪರ್ಯಾಸವೇ ಸರಿ.
ಹೀಗಿರುವಾಗ ಜಾಲತಾಣಗಳಲ್ಲಿ ಸಖತ್ ವೇಗವಾಗಿ ಹರಿದಾಡುವ ಹಲವು ಅಚ್ಚರಿ ಮತ್ತು ಊಹೆಗೂ ಮೀರಿದ ವಿಷಯಗಳು ನಮ್ಮನ್ನು ಸೆಳೆದು, ಅದರ ಬಗ್ಗೆ ದೀರ್ಘ ಕಾಲ ಚರ್ಚಿಸುವಂತೆ ದೂಡುತ್ತದೆ. ಈ ಸಾಲಿಗೆ ಇಲ್ಲೊಂದು ಹಳೆಯ ಸೈಕಲ್ ಬಿಲ್ ಸೇರ್ಪಡೆಗೊಂಡಿದೆ.
1934ರಲ್ಲಿ ಒಂದು ಸೈಕಲ್ ಬೆಲೆ ಎಷ್ಟಿತ್ತು? ಎಂಬುದರ ಬಗ್ಗೆ ಬಹುತೇಕರಿಗೆ ತಿಳಿದಿರಲು ಸಾಧ್ಯವೇ ಇಲ್ಲ ಬಿಡಿ. ಅದನ್ನು ಊಹಿಸುವುದು ಕೂಡ ಕೊಂಚ ಕಷ್ಟವೇ. ಆದ್ರೆ, ಇಲ್ಲೊಂದು ಹಳೆಯ ಸೈಕಲ್ ಬಿಲ್ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಂದಿನ ಕಾಲದಲ್ಲಿ ಒಂದು ಸೈಕಲ್ ಕೊಳ್ಳುವುದು ಎಷ್ಟು ಕಠಿಣವಾಗಿತ್ತು ಮತ್ತು ಸವಾಲಾಗಿತ್ತು ಎಂಬುದನ್ನು ಅರ್ಥೈಸಿದೆ. ಹಲವರ ಹುಬ್ಬೇರಿಸಿರುವ ಈ ಬಿಲ್ ಕೋಲ್ಕತ್ತಾದ ಮಾಣಿಕ್ತಾಲಾದಲ್ಲಿರುವ ಕುಮುದ್ ಸೈಕಲ್ ವರ್ಕ್ಸ್ ಎಂಬ ಅಂಗಡಿಗೆ ಸೇರಿದ್ದಾಗಿದೆ. ಬಿಲ್‌ನಲ್ಲಿ, ಸೈಕಲ್ ಮತ್ತು ಅದರ ಐಟಂಗಳ ಬೆಲೆಯನ್ನು ಪೆನ್ಸಿಲ್‌ನಿಂದ ಬರೆಯಲಾಗಿದೆ.
ವೈರಲ್ ಫೋಟೋದಲ್ಲಿ, “ಸಂಖ್ಯೆ 1933 ಹೊಂದಿರುವ ಲೈಟ್ ಮತ್ತು ಬೆಲ್ ಇರುವ ಸೈಕಲ್ಗೆ 18 ರೂ." ಎಂದು ಚೀಟಿಯಲ್ಲಿ ಬರೆಯಲಾಗಿದೆ. ಇದು ಜನವರಿ 07, 1934ರಲ್ಲಿ ಹಾಕಲಾದ ಬಿಲ್ ಎಂಬುದು ಖಚಿತವಾಗಿದೆ. ವೈರಲ್ ಆದ ಹಳೆಯ ಸೈಕಲ್ ಬಿಲ್ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಅಂದಿನ ಮಟ್ಟಕ್ಕೆ ಇದು 18 ರೂ. ಇತ್ತು ಎಂದಾದರೆ ಇಂದು ಇದರ ಬೆಲೆ ಎಷ್ಟಿರುತ್ತಿತ್ತು? ಎಷ್ಟಿರಬಹುದು? ಎಂಬ ಲೆಕ್ಕಾಚಾರದಲ್ಲಿ ಅನೇಕರು ತೊಡಗಿದ್ದಾರೆ,(ಏಜೆನ್ಸೀಸ್).