

Indus Waters Treaty: ಪಾಕಿಸ್ತಾನ ಜತೆಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸುವ ನಿರ್ಧಾರ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಷೇರು ತೀವ್ರವಾಗಿ ಕುಸಿದಿದ್ದು, ಶೇ.2ರಷ್ಟು ಇಳಿಕೆ ಕಂಡಿದೆ. ಮಾರುಕಟ್ಟೆ ಆರಂಭವಾದ ತಕ್ಷಣ ಷೇರು ಸೂಚ್ಯಂಕಗಳು ಕುಸಿದಿವೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ಗುಂಡಿನ ದಾಳಿಯ ಬೆನ್ನಲ್ಲೇ ಪಾಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕಟು ನಿರ್ಧಾರಗಳ ಬಿಸಿ ಈಗ ಪಾಕ್ಗೆ ತಟ್ಟಲು ಶುರುವಾಗಿದೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂಭವಿಸಿದ ಉಗ್ರರ ಭೀಕರ ಗುಂಡಿನ ದಾಳಿಗೆ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ ಸರ್ಕಾರ, ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿರುವುದನ್ನು ಖಚಿತಪಡಿಸಿಕೊಂಡಿದೆ. ಅಮಾಯಕರ ಮೇಲೆ ಅಟ್ಟಹಾಸ ಮೆರೆದ ಉಗ್ರರನ್ನು ಸದೆಬಡಿಯಲು ಪಣತೊಟ್ಟಿರುವ ಭಾರತೀಯ ಸೇನೆ, ಇಂದು (ಏ.25) ಬೆಳಗ್ಗೆಯೇ ಉಗ್ರರ ಮನೆಗಳನ್ನು ಛಿದ್ರಗೊಳಿಸಿದೆ.
ಭಾರತವು ಸಿಂಧೂ ನದಿ ಜಲಾನಯನ ಪ್ರದೇಶದ 80 ಪ್ರತಿಶತದಷ್ಟು ನೀರನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುತ್ತದೆ. ಪಾಕಿಸ್ತಾನದಲ್ಲಿರುವ ತರ್ಬೆಲಾ ಮತ್ತು ಮಂಗ್ಲಾದಂತಹ ಜಲವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದಿಸಲು ಈ ನದಿಯಿಂದ ಹರಿದುಬರುವ ನಿರಂತರ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿವೆ. ಪ್ರಸ್ತುತ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿರುವ ಹಿನ್ನೆಲೆ ಪಾಕ್ ಜಿಡಿಪಿ ಮತ್ತು ಷೇರುಪೇಟೆ ಭಾರೀ ಕುಸಿತ ಅನುಭವಿಸಿದೆ.
ಸಿಂಧೂ ಜಲ ಒಪ್ಪಂದದ ರದ್ದು ಪಾಕಿಸ್ತಾನದ ಕೃಷಿ ವಲಯದ ಮೇಲೆ ಮಾತ್ರವಲ್ಲದೆ ವಿದ್ಯುತ್ ಪೂರೈಕೆಯ ಮೇಲೂ ತೀವ್ರ ಪರಿಣಾಮ ಬೀರಲಿದೆ. ನೀರಿನ ಲಭ್ಯತೆ ಮತ್ತು ನೀರಿನ ಕೊರತೆಯಲ್ಲಿನ ಅಸ್ಥಿರತೆಯಿಂದಾಗಿ, ಪಾಕಿಸ್ತಾನ ಪ್ರತಿ ವರ್ಷ 19 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ. ಕಲ್ಲಿದ್ದಲು ಆಮದುಗಳಿಂದಾಗಿ ದೇಶದ ಮೇಲಿನ ಆರ್ಥಿಕ ಹೊರೆ 2021ರ ವೇಳೆಗೆ 1.5 ಬಿಲಿಯನ್ ಡಾಲರ್ ತಲುಪಿದೆ. ಪ್ರಸ್ತುತ, ಪಾಕಿಸ್ತಾನವು ತನ್ನ ಜಿಡಿಪಿಯ ಶೇ. 60ಕ್ಕಿಂತ ಹೆಚ್ಚು ಸಾಲದ ಶೂಲದಲ್ಲಿ ಸಿಲುಕಿದೆ.
2025ರಲ್ಲಿ ಪಾಕಿಸ್ತಾನದ ಜಿಡಿಪಿ ಕೇವಲ ಶೇ. 2.7ರಷ್ಟು ಬೆಳೆಯುತ್ತದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ದೇಶದ ಜಿಡಿಪಿಗೆ ಕೃಷಿ ಪ್ರಮುಖ ಕೊಡುಗೆ ನೀಡುತ್ತಿದ್ದರೆ, ಉದ್ಯಮವು ಎರಡನೇ ಸ್ಥಾನದಲ್ಲಿದೆ. ಜಿಡಿಪಿಗೆ ಇಂಧನ ವಲಯದ ನೇರ ಕೊಡುಗೆ ಶೇ.2.5ರಿಂದ 3 ರಷ್ಟಿದ್ದರೂ, ಉತ್ಪಾದನೆ, ಕೃಷಿ ಮತ್ತು ಇತರ ಸೇವೆಗಳಿಂದ ಅದರ ಪರೋಕ್ಷ ಕೊಡುಗೆ ದೊಡ್ಡದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಸಿಂಧೂ ಜಲ ಒಪ್ಪಂದ ಪಾಕಿಸ್ತಾನದ ಆರ್ಥಿಕತೆಗೆ ಬಹಳ ಮುಖ್ಯವಾಗಿದೆ. ಪಾಕಿಸ್ತಾನದ ತುರ್ಬೆಲಾ ಮತ್ತು ಮಂಗ್ಲಾದಂತಹ ವಿದ್ಯುತ್ ಸ್ಥಾವರಗಳು ಸಿಂಧೂ ಮತ್ತು ಝೀಲಂ ನದಿಗಳನ್ನು ಅವಲಂಬಿಸಿವೆ. ಕೈಗಾರಿಕೆಗಳು ಪಾಕಿಸ್ತಾನದಲ್ಲಿ ಎರಡನೇ ಅತಿದೊಡ್ಡ ವಿದ್ಯುತ್ ಗ್ರಾಹಕ. ಕರಾಚಿ, ಲಾಹೋರ್ ಮತ್ತು ಮುಲ್ತಾನ್‌ನಂತಹ ಪ್ರಮುಖ ನಗರ ಕೇಂದ್ರಗಳು ಈ ನದಿಗಳಿಂದ ನೇರವಾಗಿ ನೀರನ್ನು ಸ್ವೀಕರಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ಭಾರತದ ನಿರ್ಧಾರವು ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ 1960, ಸೆಪ್ಟೆಂಬರ್ 19ರಂದು ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ)ಕ್ಕೆ ಸಹಿ ಹಾಕಿದವು. ಗಡಿಯಾಚೆಗಿನ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಇದು ಒಂದು ಪ್ರಮುಖ ಒಪ್ಪಂದವೆಂದು ಪರಿಗಣಿಸಲಾಗಿದೆ. ಒಂಬತ್ತು ವರ್ಷಗಳ ಮಾತುಕತೆಗಳ ನಂತರ, ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಹಂಚಿಕೊಳ್ಳಲು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.