ಪಹಲ್ಗಾಮ್​ ಗುಂಡಿನ ದಾಳಿಗೆ ಪ್ರತೀಕಾರ! ಉಗ್ರರ ಮನೆಗಳನ್ನು ಛಿದ್ರಗೊಳಿಸಿದ ಭಾರತೀಯ ಸೇನೆ | Pahalgam Terror Attack

ವಿಜಯವಾಣಿ (65)
Published on

Pahalgam Terror Attack: ಏಪ್ರಿಲ್​ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಸಂಭವಿಸಿದ ಉಗ್ರರ ಭೀಕರ ಗುಂಡಿನ ದಾಳಿಗೆ 26 ಅಮಾಯಕರು ಜೀವಬಿಟ್ಟಿದ್ದಾರೆ. ಕರ್ನಾಟಕದ ಮೂವರು ಸೇರಿದಂತೆ ಒಟ್ಟು 26 ಮಂದಿಪ್ರಾಣವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. 2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಉಗ್ರರ ಹುಟ್ಟನ್ನು ಅಡಗಿಸಲು ಪಣತೊಟ್ಟಿರುವ ಭಾರತ, ಇಂದು ಇಬ್ಬರು ಉಗ್ರರ ಮನೆಗಳನ್ನು ಉಡೀಸ್ ಮಾಡಿದೆ.

ಸಿಂಧೂ ಹರಿಯುವುದನ್ನು ನಿಲ್ಲಿಸಿದ ಭಾರತ ವಿರುದ್ಧ ತೀವ್ರ ಕಿಡಿಕಾರಿರುವ ಪಾಕಿಸ್ತಾನ, ರಾತ್ರಿಯಿಡೀ ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಭಾರತಕ್ಕೆ ಎಚ್ಚರಿಕೆ ರವಾನಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ, ಇಂದು ಪಹಲ್ಗಾಮ್​ ದಾಳಿಯಲ್ಲಿ ಭಾಗಿಯಾದ ಇಬ್ಬರು ಉಗ್ರರ ಮನೆಗಳನ್ನು ಛಿದ್ರಗೊಳಿಸಿದೆ. ಮನೆಗಳು ಸಂಪೂರ್ಣವಾಗಿ ಉಡೀಸ್ ಆಗಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ (ಏಪ್ರಿಲ್​ 23) ಸಂಜೆ ದೆಹಲಿಯ ಲೋಕ ನಾಯಕ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸುವವರೆಗೆ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಲಾಯಿತು. ಇದೊಂದು ಮಾತ್ರವಲ್ಲದೇ ಭಾರತ ತೆಗೆದುಕೊಂಡ ಹಲವು ಮಹತ್ವದ ನಿರ್ಧಾರಗಳು ಪಾಕಿಸ್ತಾನದ ಮೇಲೆ ಭಾರೀ ಪರಿಣಾಮ ಬೀರಲು ಪ್ರಾರಂಭಿಸಿವೆ.

ನಿನ್ನೆಯಷ್ಟೇ ಪಾಕಿಸ್ತಾನ ಜತೆಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸುವ ನಿರ್ಧಾರ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಷೇರು ತೀವ್ರವಾಗಿ ಕುಸಿದಿದ್ದು, ಶೇ.2ರಷ್ಟು ಇಳಿಕೆ ಕಂಡಿತು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ಗುಂಡಿನ ದಾಳಿಯ ಬೆನ್ನಲ್ಲೇ ಪಾಕ್​ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. 26 ಅಮಾಯಕರ ಜೀವವನ್ನು ಬಲಿಪಡೆದ ಉಗ್ರರ ಅಟ್ಟಹಾಸ ಮಣಿಸಲು ಭಾರತ ತೆಗೆದುಕೊಂಡ ಕಟು ನಿರ್ಧಾರಗಳ ಬಿಸಿ ಈಗ ಪಾಕ್​​ಗೆ ತಟ್ಟಲಾರಂಭಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net