ಕೈತೋರಿಸಿದ ಹೆಜಲ್​ವುಡ್​ ವಿರುದ್ಧ ಜೈಸ್ವಾಲ್ ಕೆಂಡಾಮಂಡಲ! ಮೈದಾನದಲ್ಲೇ ಸಿಟ್ಟಾದ ಆರ್​ಆರ್​ ಬ್ಯಾಟರ್​ | RCB vs RR

ವಿಜಯವಾಣಿ (64)
Published on

RCB vs RR: ನಿನ್ನೆ (ಏ.24) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಆರ್​ಆರ್​ ನಡುವಿನ ಪಂದ್ಯ ಭಾರೀ ರೋಚಕತೆಗೆ ಸಾಕ್ಷಿಯಾಯಿತು. 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 205 ರನ್​ ಕಲೆಹಾಕಿದ ಆರ್​ಸಿಬಿ, ರಾಜಸ್ಥಾನ ಪಡೆಗೆ 206 ರನ್​ಗಳ ಗುರಿಯನ್ನು ಬೆನ್ನಟ್ಟುವಂತೆ ಸವಾಲು ಹಾಕಿತು. ಆದರೆ, ಅಂತಿಮವಾಗಿ 11 ರನ್​ಗಳಿಂದ ಆರ್​ಆರ್​ ಸೋಲುಂಡಿತು.

ಆರ್​ಸಿಬಿ ನೀಡಿದ ಗುರಿಯನ್ನು ಬೆನ್ನತ್ತಿದ ಆರಂಭಿಕ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್​ ರಘುವಂಶಿ, ಪವರ್​ಪ್ಲೇನಲ್ಲಿ ಸ್ಫೋಟಕ ಇನ್ನಿಂಗ್ಸ್​ ನೀಡಿದರು. ಈ ವೇಳೆ ಭುವನೇಶ್ವರ್ ಓವರ್​ನಲ್ಲಿ ವಿಕೆಟ್​ ಕಳೆದುಕೊಂಡ ವೈಭವ್​, ಜೈಸ್ವಾಲ್​ಗೆ ಸಾಥ್ ನೀಡುವಲ್ಲಿ ವಿಫಲರಾದರು. ಧೃತಿಗೆಡದ ಜೈಸ್ವಾಲ್​, ಸ್ಫೋಟಕ ಇನ್ನಿಂಗ್ಸ್​ ಮೂಲಕ ಅರ್ಧಶತಕಕ್ಕೆ ಒಂದೇ ಒಂದು ರನ್​ ಸನಿಹದಲ್ಲಿದ್ದರು. ಈ ವೇಳೆ ಜೋಸ್​ ಹೆಜಲ್​ವುಡ್​​ ವಿಕೆಟ್​ ಕಬಳಿಸಿ, ಜೈಸ್ವಾಲ್​ರ ಅರ್ಧಶತಕ ಮೊಟಕುಗೊಳಿಸಿದರು.

ನಾಲ್ಕನೇ ಓವರ್​ನಲ್ಲಿ ಹೆಜ್​ಲ್​ವುಡ್​ ಬೌಲಿಂಗ್​ಗೆ ಮೂರು ಬಾಲ್​ ಡಾಟ್​ ಮಾಡಿದ ಜೈಸ್ವಾಲ್​, ಮುಂದಿನ ಮೂರು ಬಾಲ್​ ಬೌಂಡರಿ ಬಾರಿಸಿದರು. ಈ ಮೂಲಕ ತಮ್ಮ ಶೈಲಿಯಲ್ಲೇ ಖಡಕ್ ಆಗಿ ಉತ್ತರಿಸಿದರು. ಆದರೆ, ಪವರ್‌ಪ್ಲೇ ಕೊನೆಯ ಓವರ್‌ನಲ್ಲಿ, ಮೊದಲ ನಾಲ್ಕು ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಸಿಕ್ಸ್ ಸಿಡಿಸಿದ ಜೈಸ್ವಾಲ್​, ಆತುರದಲ್ಲಿ ಬ್ಯಾಟ್​ ಮಾಡಲು ಹೋಗಿ ಕ್ಯಾಚ್ ನೀಡಿದರು. ಯಶಸ್ವಿ ವಿಕೆಟ್​ ಕಿತ್ತ ಸಂಭ್ರಮದಲ್ಲಿ ಕೈತೋರಿಸಿ ಔಟ್ ಎಂದ ಹೆಜಲ್​​ವುಡ್​ ನಡೆಗೆ ಸಿಟ್ಟಾದ ಜೈಸ್ವಾಲ್​, ಬೈಯುತ್ತಲೇ ಪೆವಿಲಿಯನ್​ನತ್ತ ಸಾಗಿದ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ.

ಗೆಲ್ಲುವ ಪಂದ್ಯವನ್ನು 11 ರನ್‌ಗಳಿಂದ ಸೋಲುಂಡ ಆರ್​ಆರ್​, ಲೀಗ್​ನಲ್ಲಿ ಸತತ ಐದನೇ ಪಂದ್ಯವನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ 8 ಸ್ಥಾನಕ್ಕೆ ಕುಸಿದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net