

Asim Munir : ಭಾರತದ ದಾಳಿಯನ್ನು ಹಿಮ್ಮೆಟ್ಟಿಸಲು ರೆಡಿಯಾಗಿರಿ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥರು ತಮ್ಮ ಸೈನ್ಯಕ್ಕೆ ಆದೇಶ ನೀಡಿದ್ದಾರೆ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ವರ್ತನೆ ಏಕೆ ಹೀಗಿದೆ? ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವ ಬದಲು ಭಾರತವನ್ನು ಕೆರಳಿಸಲು ಪದೇ ಪದೇ ಹುಚ್ಚುಚ್ಚು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದೇಕೆ? ಸದ್ಯ ಯುದ್ಧ ಮಾಡುವ ಸ್ಥಿತಿಯಲ್ಲಿ ಪಾಕ್ ಇದೆಯೇ? ನಿಜವಾದ ಯುದ್ಧ ಪ್ರಾರಂಭವಾದರೆ ಅದರ ಪರಿಣಾಮ ಏನೆಂದು ಅಸಿಮ್ ಮುನೀರ್ ಅವರಿಗೆ ತಿಳಿದಿಲ್ಲವೇ? ಯುದ್ಧದ ನಂತರದ ಪರಿಣಾಮಗಳ ಬಗ್ಗೆ ಮುನೀರ್ ತಿಳಿದಿದ್ದರೂ ಸಹ ಭಾರತದೊಂದಿಗೆ ಯುದ್ಧವನ್ನು ಏಕೆ ಬಯಸುತ್ತಿದ್ದಾರೆ?
ಪ್ರಸ್ತುತ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿರುವ ಅಸಿಮ್ ಮುನೀರ್, ಅಲ್ಲಿನ ಜನರಲ್ಲಿ ಅಷ್ಟೇನೂ ಜನಪ್ರಿಯತೆ ಪಡೆದಿಲ್ಲ. ಸೇನೆಯು ಕೂಡ ಅವರ ನಿಯಂತ್ರಣದಲ್ಲಿ ಇಲ್ಲ ಎಂಬ ಟೀಕೆ ಇದೆ. ಯಾರೂ ತಮ್ಮ ಸಾಮರ್ಥ್ಯಗಳನ್ನು ಗುರುತಿಸದ ಕಾರಣ ಮುನೀರ್, ಹೆಚ್ಚು ಹೆಚ್ಚು ನಿರಾಶೆಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಮತ್ತೊಂದೆಡೆ, ಬಲೂಚಿಸ್ತಾನದ ಬಂಡುಕೋರರಿಂದ ಹೆಚ್ಚುತ್ತಿರುವ ಬೆದರಿಕೆ ಕೂಡ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ.
ಖೈಬರ್ ಪಖ್ತುಂಖ್ವಾದಿಂದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಹೊರಹೊಮ್ಮುತ್ತಿದ್ದು, ಡಜನ್ಗಟ್ಟಲೆ ಸೈನಿಕರನ್ನು ಕೊಲ್ಲುತ್ತಿದೆ. ಈ ಮಧ್ಯೆ, ಸಿಂಧ್ ಗಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಲುವೆ ಯೋಜನೆಯ ವಿರುದ್ಧ ಸ್ಥಳೀಯರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಹಾಕಿದ್ದಕ್ಕಾಗಿ ಪಂಜಾಬ್‌ನಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ.
ಇತ್ತೀಚಿನ ರೈಲು ಅಪಹರಣ ಘಟನೆಯು ಪಾಕಿಸ್ತಾನ ಸೇನೆಯು ತಮ್ಮದೇ ದೇಶದಲ್ಲಿ ಒಂದೇ ಒಂದು ರೈಲನ್ನು ಸಹ ರಕ್ಷಿಸಲು ಸಾಧ್ಯವಾಗದ ಭೀಕರ ಪರಿಸ್ಥಿತಿಯಲ್ಲಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಪಾಕಿಸ್ತಾನ ಸೇನಾ ಮುಖ್ಯಸ್ಥರ ಪ್ರತಿಷ್ಠೆ ಎಲ್ಲ ಅಂಶಗಳಲ್ಲಿಯೂ ಕಳಂಕಿತವಾಗಿದೆ. ಅಸಿಮ್ ಮುನೀರ್ ಕಾಶ್ಮೀರ ಸಮಸ್ಯೆಯನ್ನು ಮುನ್ನೆಲೆಗೆ ತಂದು ತಾನು ಸಮರ್ಥನೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಪಾಕಿಸ್ತಾನಿ ಜನರಲ್ಲಿ ತಮ್ಮ ನಾಯಕರಿಗಿಂತ ಸೈನ್ಯ ಮುಖ್ಯ. ಸೇನಾ ಮುಖ್ಯಸ್ಥ ಏನು ಹೇಳಿದರೂ ಕುರುಡಾಗಿ ನಂಬುವ ಜನರಿದ್ದಾರೆ. ಆದ್ದರಿಂದ, ಅಸಿಮ್ ಮುನೀರ್ ಭಾರತದೊಂದಿಗೆ ಯುದ್ಧಕ್ಕೆ ಹೋಗಲು ಉತ್ಸುಕನಾಗಿದ್ದಾನೆ. ಆದರೆ, ಯುದ್ಧವನ್ನು ತನ್ನ ಸ್ವಂತಕ್ಕೆ ಬಳಸಿದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂಬ ಭಯದಿಂದ, ಭಾರತ ವಿರುದ್ಧ ನೇರವಾಗಿ ಯುದ್ಧಕ್ಕೆ ಇಳಿಯದೇ ಭಯೋತ್ಪಾದಕ ದಾಳಿಗಳನ್ನು ಪ್ರಚೋದಿಸುವುದು ಆತನ ಯೋಜನೆಯಾಗಿದೆ ಎಂದು ತೋರುತ್ತದೆ.
ಆದರೆ, ಅಸಿಮ್ ಮುನೀರ್ ನಿರೀಕ್ಷಿಸಿದಂತೆ ಯುದ್ಧ ಬಂದರೆ, ಪಾಕಿಸ್ತಾನ ಭಾರತದೊಂದಿಗೆ ಹೋರಾಡಲು ಸಾಧ್ಯವಾಗುವುದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಏನೇ ಸಂಭವಿಸಿತು ಎಂಬುದು ಎಲ್ಲರಿಗೂ ಗೊತ್ತಿದೆ. ಪಾಕಿಸ್ತಾನ ಆ ಯುದ್ಧದಲ್ಲಿ ಬಾಲ ಮುದುರಿಕೊಂಡು ಪಲಾಯನ ಮಾಡಬೇಕಾಯಿತು. ಮತ್ತೊಂದೆಡೆ, ಐಎಂಎಫ್ ಸೇರಿದಂತೆ ಹಲವು ದೇಶಗಳಿಂದ ಸಹಾಯ ಕೇಳಿದರೂ 7 ಬಿಲಿಯನ್ ಡಾಲರ್ ಸಾಲವನ್ನು ಹೊತ್ತುಕೊಂಡಿರುವ ಪಾಕಿಸ್ತಾನ, ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾದ ಭಾರತದೊಂದಿಗೆ ಮತ್ತೊಮ್ಮೆ ಘರ್ಷಣೆ ನಡೆಸಲು ಬಯಸುತ್ತಿರುವುದು ಅವರ ಹತಾಸೆಗೆ ಸಾಕ್ಷಿಯಾಗಿದೆ.
ಯುದ್ಧ ಮಾಡಲು, ಬೃಹತ್ ರಕ್ಷಣಾ ಬಜೆಟ್ ಹೊಂದಿದರೆ ಸಾಕಾಗುವುದಿಲ್ಲ. ಯುದ್ಧದ ನಂತರದ ಪರಿಣಾಮಗಳನ್ನು ನಿಭಾಯಿಸಲು ನಿಮಗೆ ಬಲಿಷ್ಠ ಆರ್ಥಿಕತೆ ಕೂಡ ಬೇಕು. ಈ ಸಾಮರ್ಥ್ಯ ತನ್ನ ಬಳಿ ಇದೆಯೋ ಇಲ್ಲವೋ ಎಂಬುದನ್ನು ಬೇರೆ ಯಾವುದೇ ದೇಶಕ್ಕಿಂತ ಪಾಕಿಸ್ತಾನವೇ ಚೆನ್ನಾಗಿ ತಿಳಿದಿದೆ. ಆದಾಗ್ಯೂ, ತನ್ನ ಕಳಂಕಿತ ಖ್ಯಾತಿಯನ್ನು ಉಳಿಸಿಕೊಳ್ಳಲು ಅಂತಹ ಯುದ್ಧ ತಂತ್ರವನ್ನು ಹುಡುಕುತ್ತಿರುವ ಪಾಕಿಸ್ತಾನಿ ಸೇನಾ ಮುಖ್ಯಸ್ಥರಿಗೆ ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್)