ಭಾರತದ ಚಿನ್ನದ ಬೇಡಿಕೆ ಶೇ.17 ಇಳಿಕೆ: ವಿಶ್ವ ಚಿನ್ನ ಮಂಡಳಿ ವರದಿ

Gold Demand
Published on

ನವದೆಹಲಿ: ಪ್ರಸಕ್ತ ವರ್ಷದ ಜನವರಿ - ಮಾರ್ಚ್​ನ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆ ಶೇ. 17ರಷ್ಟು ಇಳಿಕೆಯಾಗಿದ್ದು, ಹಳದಿ ಲೋಹದ ಬೆಲೆ ದುಬಾರಿಯಾಗಿದ್ದು ಇದಕ್ಕೆ ಕಾರಣ ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ತಿಳಿಸಿದೆ.

ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆಯಿಂದ ಅಂತಾರಾಷ್ಟ್ರೀಯ ವಿದೇಶಿ ವಿನಿಮಯದಲ್ಲಿ ಡಾಲರ್ ಮೌಲ್ಯ ಹೆಚ್ಚಾಗಿದೆ. ಇದು ಚಿನ್ನದ ಬೆಲೆಯನ್ನು 10 ಗ್ರಾಂಗೆ 60 ಸಾವಿರ ದಾಟುವಂತೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಧಾರಣೆ ಶೇ. 19 ಏರಿಕೆ ಆಗಿದೆ.

2010ರ ನಂತರ ಕೋವಿಡ್ ಸಾಂಕ್ರಾಮಿಕದ ಸಮಯ ಹೊರತು ಪಡಿಸಿದರೆ ಚಿನ್ನಾಭರಣದ ಬೇಡಿಕೆ ಜನವರಿ-ಮಾರ್ಚ್ ತ್ರೖೆಮಾಸಿಕದಲ್ಲಿ 100 ಟನ್​ಗಿಂತ ಕೆಳಗೆ ಇಳಿದಿರುವುದು ಇದು ನಾಲ್ಕನೇ ಸಾರಿ. ಬಂಗಾರದ ಬೆಲೆ ಗಗನಮುಖಿಯಾಗಿರುವುದು ಇದಕ್ಕೆ ಕಾರಣ. ಬಂಗಾರದ ಬೇಡಿಕೆ ಇದೇ ಮಟ್ಟದಲ್ಲಿ ಇದ್ದರೆ ಒಟ್ಟಾರೆ ಈ ವರ್ಷದ ಬೇಡಿಕೆ 750ರಿಂದ 800 ಟನ್ ಇರುವ ಅಂದಾಜಿದೆ. | ಸೋಮಸುಂದರಮ್ ಡಬ್ಲ್ಯುಜಿಸಿ ಭಾರತದ ಪ್ರಾದೇಶಿಕ ಸಿಇಒ

* 2022ರ ಇದೇ ತ್ರೖೆಮಾಸಿಕದಲ್ಲಿ 135.5 ಟನ್ ಇದ್ದ ಚಿನ್ನದ ಬೇಡಿಕೆ ಈ ಸಾರಿ 112.5 ಟನ್​ಗೆ ಇಳಿಕೆ.

* ಚಿನ್ನದ ಬೆಲೆಯ ಹೋಲಿಕೆಯಲ್ಲಿ 56,220 ಕೋಟಿ ರೂ. ಇದ್ದು, ಕಳೆದ ವರ್ಷದ ಇದೇ ಅವಧಿಗಿಂತ ಶೇ. 9ರಷ್ಟು ಕಡಿಮೆ ಆಗಿದೆ. 2022ರಲ್ಲಿ 61,540 ಕೋಟಿ ರೂ. ಇತ್ತು.

* ಚಿನ್ನಾಭರಣಗಳ ಬೇಡಿಕೆ 78 ಟನ್​ಗೆ ಇಳಿಕೆ ಆಗಿದೆ. 2022ರಲ್ಲಿ ಇದು 94.2 ಟನ್ ಇತ್ತು.

* ಚಿನ್ನಾಭರಣದ ಮೌಲ್ಯದಲ್ಲಿ 39 ಸಾವಿರ ಕೋಟಿ ರೂ. ಇದ್ದು, ಕಳೆದ ವರ್ಷ ಇದೇ ಅವಧಿಗಿಂತ 9ರಷ್ಟು ಇಳಿದಿದೆ. 2022ರಲ್ಲಿ 42,800 ಕೋಟಿ ರೂ. ಇತ್ತು.

* ಚಿನ್ನದ ಗಟ್ಟಿ, ನಾಣ್ಯದ ಮೇಲಿನ ಹೂಡಿಕೆಯಲ್ಲೂ ಶೇ. 17 ಇಳಿಕೆಯಾಗಿದ್ದು, 34.4 ಟನ್ ಇದೆ. ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ಇದು 41.3 ಟನ್ ಇತ್ತು.

* ಬೆಲೆಯಲ್ಲಿ ಹೇಳುವುದಾದರೆ ಜನವರಿಯಿಂದ ಮಾರ್ಚ್ ವರೆಗೆ 17,200 ಕೋಟಿ ರೂ. ಇದ್ದು, ಶೇ. 8 ಇಳಿಕೆ ಕಂಡಿದೆ. ಕಳೆದ ವರ್ಷ ಇದೇ ವೇಳೆಗೆ 18,750 ಕೋಟಿ ರೂ. ಹೂಡಿಕೆ ಆಗಿತ್ತು.

* ಚಿನ್ನದ ಮರುಬಳಕೆ ಶೇ. 25ರಷ್ಟು ಏರಿಕೆ ಆಗಿದ್ದು, 34.8 ಟನ್​ಗೆ ಮುಟ್ಟಿದೆ. ಕಳೆದ ವರ್ಷ 27.8 ಟನ್ ಇತ್ತು.

* ಜನವರಿ-ಮಾರ್ಚ್​ವರೆಗೆ ಭಾರತದ ಒಟ್ಟು ಚಿನ್ನದ ಆಮದು 134 ಟನ್. 2022ರ ಇದೇ ಅವಧಿಯಲ್ಲಿ ಸರಿಸುಮಾರು ಇಷ್ಟೇ ಪ್ರಮಾಣದ ಚಿನ್ನ ಆಮದಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net