ಚೆನ್ನೈ: ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಅಜಿತ್ಗೆ ಬೈಕ್ ಕ್ರೇಜ್ ತುಂಬಾ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚೆಗೆ ಅಜಿತ್ ಅವರು ಬೈಕ್ಗಳಲ್ಲಿ ಹೆಚ್ಚು ಪ್ರವಾಸ ಮಾಡುತ್ತಿದ್ದಾರೆ. ವಾಲಿಮೈ ಸಿನಿಮಾ ಬಳಿಕ ಬೈಕ್ನಲ್ಲೇ ಯೂರೋಪ್ ಪ್ರವಾಸ ಮಾಡಿದ್ದರು. ಇದೀಗ ಭಾರತ ಮತ್ತು ನೇಪಾಳದಲ್ಲಿ ಅಜಿತ್ ಬೈಕ್ ಪ್ರವಾಸ ಮಾಡಿದ್ದಾರೆ.
ಅಜಿತ್ ಅವರ ಇತ್ತೀಚಿನ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಅವರು ಅಭಿಮಾನಿಯೊಬ್ಬರ ಪ್ರಾಣವನ್ನು ಉಳಿಸಿರುವಂತೆ ತೋರುತ್ತದೆ. ಬೈಕ್ನಲ್ಲಿ ಓವರ್ಟೇಕ್ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಇಚ್ಛಿಸಿದ ಅಭಿಮಾನಿಯನ್ನು ತಮ್ಮ ಸಮಯಪ್ರಜ್ಞೆಯಿಂದ ಕಾಪಾಡಿದ್ದಾರೆ. ಈ ವಿಡಿಯೋ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಮತ್ತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಗ್ರಾಹಕಸ್ನೇಹಿ ಕ್ರಮ: ಖಾದ್ಯ ತೈಲ ಬೆಲೆ ಇಳಿಸಲು ಕೇಂದ್ರ ಸರ್ಕಾರ ಸೂಚನೆ
ಬೈಕ್ನಲ್ಲಿ ಪ್ರಪಂಚ ಪರ್ಯಟನೆ
ಅಜಿತ್ ಅವರು ಕೊನೆಯದಾಗಿ ಎಚ್. ವಿನೋದ್ ನಿರ್ದೇಶನದ ತುನಿವು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು. ಈ ಸಿನಿಮಾ ಬಿಡುಗಡೆಗೂ ಮುನ್ನ ಅಜಿತ್ ತಮ್ಮ ಮೋಟಾರ್ ಸೈಕಲ್‌ನಲ್ಲಿ ಜಗತ್ತನ್ನು ಸುತ್ತುತ್ತಿದ್ದರು. ಅವರು ಯುರೋಪ್ ಮತ್ತು ಭಾರತವನ್ನು ಪ್ರವಾಸ ಮಾಡಿದ್ದರು ಮತ್ತು ತುನಿವು ಚಿತ್ರೀಕರಣದ ಸಮಯದಲ್ಲಿ ಥೈಲ್ಯಾಂಡ್ ಅನ್ನು ಸಹ ಕವರ್ ಮಾಡಿದ್ದರು. 2022ರ ಜೂನ್ ತಿಂಗಳಲ್ಲಿ ತುನಿವು ಚಿತ್ರೀಕರಣದ ಎರಡನೇ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದ ನಂತರ, ಅಜಿತ್ ಯುರೋಪ್ಗೆ ರಸ್ತೆ ಪ್ರವಾಸವನ್ನು ಕೈಗೊಂಡರು.
ಸೈನಿಕರೊಂದಿಗೆ ಅಜಿತ್
2021ರ ಅಕ್ಟೋಬರ್ನಲ್ಲಿ ಅಜಿತ್, ಉತ್ತರ ಭಾರತದ ಬೈಕ್ ರೈಡಿಂಗ್ ಪ್ರವಾಸವನ್ನು ಕೈಗೊಂಡರು. ದೆಹಲಿ ಮತ್ತು ಅಮೃತಸರಕ್ಕೆ ಭೇಟಿ ನೀಡಿದರು. ಅಜಿತ್ ಅವರು ಭಾರತೀಯ ಸೇನೆಯ ಸೈನಿಕರೊಂದಿಗೆ ಬೈಕ್ ಸಮೇತ ತೆಗೆಸಿಕೊಂಡಿರುವ ಫೋಟೋಗಳ ಸರಣಿಯನ್ನು ನಿರ್ಮಾಪಕ ಬೋನಿ ಕಪೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಜಿತ್ ಅವರು ವಾಘಾ ಗಡಿಗೆ ಭೇಟಿ ನೀಡಿದ್ದರು ಮತ್ತು ದೆಹಲಿಯಲ್ಲಿ ವಿಶ್ವಪ್ರಸಿದ್ಧ ಮಹಿಳಾ ಬೈಕರ್ ಮಾರಲ್ ಯಾಜರ್ಲೂ ಅವರನ್ನು ಭೇಟಿಯಾದರು. ಇಬ್ಬರು ಬೈಕ್ ಸವಾರರು ತಮ್ಮ ಬೈಕಿಂಗ್ ಅನುಭವವನ್ನು ಹಂಚಿಕೊಂಡರು. 2021ರ ಸೆಪ್ಟೆಂಬರ್ ತಿಂಗಳಲ್ಲಿ ವಲಿಮೈ ಸಿನಿಮಾ ಚಿತ್ರೀಕರಣ ಮುಗಿಸಿದ ನಂತರ ಅಜಿತ್ ರಷ್ಯಾದಲ್ಲಿ ಬೈಕ್ ಪ್ರವಾಸ ಕೈಗೊಂಡರು. ರಷ್ಯಾದಲ್ಲಿ ತನ್ನ ಬೈಕ್ ಟ್ರಿಪ್ ಅನ್ನು ಆನಂದಿಸುತ್ತಿರುವ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದವು.
ನೇಪಾಳ ಪ್ರವಾಸ
ಇತ್ತೀಚೆಗೆ ಅಜಿತ್ ಅವರು ತಮ್ಮ ಬೈಕ್ನಲ್ಲಿ ನೇಪಾಳದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೇಪಾಳಕ್ಕೆ ಭೇಟಿ ನೀಡಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಪ್ರವಾಸದ ನಡುವೆ ಅಭಿಮಾನಿಗಳೊಂದಿಗೆ ಅಜಿತ್ ಪೋಸ್ ನೀಡುತ್ತಿದ್ದಾರೆ ಮತ್ತು ಅಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿದ್ದಾರೆ. ಇದರ ಮಧ್ಯೆ ಅಭಿಮಾನಿಯೊಬ್ಬರ ಪ್ರಾಣ ಉಳಿಸಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಕೋರ್ಟ್ ಆದೇಶದ ಮೇರೆಗೆ ಈ ಮೂವರು ಇನ್ನು ಮದ್ಯಪಾನ ಮಾಡುವಂತಿಲ್ಲ!
ವಿಡಿಯೋದಲ್ಲಿ ಏನಿದೆ?
ನೇಪಾಳದಲ್ಲಿ ಸಂಚರಿಸುವಾಗ ಅಜಿತ್ ಅವರನ್ನು ನೋಡಿದ ಅಭಿಮಾನಿಯೊಬ್ಬ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ತನ್ನ ಬೈಕ್ನಲ್ಲಿ ಹಿಂಬಾಲಿ ಓವರ್ಟೇಕ್ ಮಾಡಲು ಯತ್ನಿಸುತ್ತಾನೆ. ಈ ವೇಳೆ ಎದುರುಗಡೆಯಿಂದ ಲಾರಿಯೊಂದ ಬರುತ್ತದೆ. ಇದನ್ನು ಗಮನಿಸಿದ ಅಜಿತ್, ತಮ್ಮ ಕೈ ಮೂಲಕ ಸನ್ನೆ ಮಾಡಿ ಓವರ್ಟೇಕ್ ಮಾಡದಂತೆ ಸೂಚನೆ ನೀಡುತ್ತಾರೆ. ಬಳಿಕ ಅಭಿಮಾನಿ ಬೈಕ್ ವೇಗವನ್ನು ಕಡಿಮೆ ಮಾಡುತ್ತಾನೆ. ಅಲ್ಲದೆ, ಅಜಿತ್ ಅಭಿಮಾನಿ ಜೊತೆಗೆ ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದು ಬರುತ್ತಿವೆ.
https://twitter.com/SilambarsanTR/status/1653782290101833728?s=20
ಸಿನಿಮಾ ವಿಚಾರಕ್ಕೆ ಬರುವುದಾದರೆ, ಮಹಿಜ್ ತಿರುಮೇನಿ ನಿರ್ದೇಶಿಸುತ್ತಿರುವ “ವಿಡಮುಯಾರ್ಚಿ” ಎಂಬ ಚಿತ್ರದಲ್ಲಿ ಅಜಿತ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಇದಕ್ಕೂ ಮೊದಲು ನಿರ್ದೇಶಕ ವಿಘ್ನೇಶ್ ಶಿವನ್ ಸಿನಿಮಾದಲ್ಲಿ ಅಜಿತ್ ನಟಿಸಬೇಕಿತ್ತು. ಆದರೆ, ಕೆಲ ಕಾರಣಗಳಿಂದ ಆ ಯೋಜನೆಯನ್ನು ಕೈಬಿಡಲಾಗಿದೆ. (ಏಜೆನ್ಸೀಸ್)
ಜಿಎಸ್ಟಿ ಸಂಗ್ರಹ ಮಾಸಿಕ ದಾಖಲೆ; ಏಪ್ರಿಲ್ನಲ್ಲೇ 1,87,035 ಕೋಟಿ ರೂ. ಕಲೆಕ್ಷನ್