More

  ಜೀವನವೇ ತೀರ್ಥಯಾತ್ರೆಯಾಗುವ ಬಗೆ…

  ಜೀವನವೇ ತೀರ್ಥಯಾತ್ರೆಯಾಗುವ ಬಗೆ…ಜನರು ಬೇರೆ ಬೇರೆ ಕಾರಣಕ್ಕೆ ಪ್ರಯಾಣ ಮಾಡುತ್ತಾರೆ. ಅನ್ವೇಷಕರು ಸಾಹಸ ಮೆರೆಯಲು ಅಥವಾ ವಿಷಯ ತಿಳಿಯಲು ಪ್ರಯಾಣ ಹೋಗುತ್ತಾರೆ. ಅಲೆಮಾರಿಗಳು ಪ್ರಯಾಣ ಮಾಡುತ್ತಾರೆ. ಏಕೆಂದರೆ ಅವರಿಗೆ ಮನೆ ಸಹ್ಯವಾಗುವುದಿಲ್ಲ. ಪ್ರವಾಸಿಗರಿಗಂತೂ ಪ್ರಯಾಣ ಖಂಡಿತ ಬೇಕು. ಏಕೆಂದರೆ ಅವರಿಗೆ ಕೆಲಸದಿಂದ ಅಥವಾ ಕುಟುಂಬದವರಿಂದ ಬಿಡುಗಡೆ ಬೇಕಾಗಿದೆ! ಜನ ಪ್ರವಾಸ ಹೋಗುತ್ತಾರೆ, ಪರ್ವತಾರೋಹಣ ಮಾಡುತ್ತಾರೆ. ಏಕೆಂದರೆ ಅವರು ಏನನ್ನಾದರೂ ಸಾಧಿಸಬೇಕೆಂದು ಬಯಸುತ್ತಾರೆ ಅಥವಾ ಜೀವನದ ಗುಣಮಟ್ಟ ವೃದ್ಧಿಸಲು ಬಯಸುತ್ತಾರೆ. ಆದರೆ, ಆದರೆ, ತೀರ್ಥಯಾತ್ರೆ ಭಿನ್ನವಾದುದು. ಅದರ ಉದ್ದೇಶ ನಿಮ್ಮನ್ನು ವಿನೀತನನ್ನಾಗಿ ಮಾಡುವುದು. ತೀರ್ಥಯಾತ್ರೆ ಎನ್ನುವುದು ಬೇರೆ ಯಾವುದೋ ಒಂದು ನಿಮ್ಮನ್ನು ಅಧೀನಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುವ ಪ್ರಕ್ರಿಯೆ.

  2005ನೇ ಇಸವಿಯಿಂದ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ನಾವು ಈಶ ಸಂಸ್ಥೆಯಿಂದ ಹಿಮಾಲಯದ ಕೈಲಾಸ ಪರ್ವತ ತೀರ್ಥಯಾತ್ರೆ ಮಾಡುತ್ತಿದ್ದೇವೆ. ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಹಿಮಾಲಯ ಯಾತ್ರೆ ಮಾಡುತ್ತಾ ಬಂದಿದ್ದಾರೆ. ಏಕೆಂದರೆ ಹಿಮಾಲಯ ಪರ್ವತದೆದುರು ನೀವು ಕುಬ್ಜರಾದ ಭಾವನೆ ಬರದಿರಲು ಸಾಧ್ಯವೇ ಇಲ್ಲ, ತೀರ್ಥಯಾತ್ರೆಯ ಉದ್ದೇಶ ಕೂಡಾ ಅದೇ: ಈ ಅಸ್ತಿತ್ವದಲ್ಲಿ ನಿಮ್ಮ ಸ್ಥಾನ ಏನೆಂದು ತಿಳಿಯಲು; ಈ ಬ್ರಹ್ಮಾಂಡದಲ್ಲಿ ನೀವೊಂದು ಸಣ್ಣ ಧೂಳಿನ ಕಣ ಎಂದು ತಿಳಿಯಲು.

  ಅದು ಕಿರಿತನವನ್ನು ಕೊಂಡಾಡಲು ಕೂಡಾ. ಮಾನವ ಜೀವಿ ಈ ಅಸ್ತಿತ್ವದಲ್ಲಿ ಒಂದು ಸಣ್ಣ ಕಣ ಅಷ್ಟೆ, ಆದಾಗ್ಯೂ ಮನಸ್ಸು ಮಾಡಿದರೆ ಇಡೀ ಅಸ್ತಿತ್ವವನ್ನೇ ನಾವು ಒಳಗೂಡಿಸಿಕೊಳ್ಳಬಹುದು. ಒಬ್ಬ ವ್ಯಕ್ತಿ ತಾನೆಷ್ಟು ಚಿಕ್ಕವನು ಎಂದು ತಿಳಿದುಕೊಳ್ಳದಿದ್ದರೆ ಅವನು ತನ್ನೊಳಗೆ ಎಲ್ಲವನ್ನೂ ಸೇರಿಸಿಕೊಳ್ಳಲಾರ. ಮನುಷ್ಯರು ತಾವು ದೊಡ್ಡವರೆಂದು ಭಾವಿಸಿದರೆ ಚಿಕ್ಕವರಾಗುತ್ತಾರೆ. ಆದರೆ, ತಾವೆಷ್ಟು ಚಿಕ್ಕವರು ಎಂದು ಅರಿತರೆ, ಅಪರಿಮಿತರಾಗುತ್ತಾರೆ. ಅದೇ ಮನುಷ್ಯನಾಗಿರುವುದರ ಸೊಗಸು.

  ಅದೇ ಮಾನವರ ಹೋರಾಟ ಕೂಡಾ. ದೊಡ್ಡವರಾಗಬೇಕೆಂಬ ಯತ್ನದಲ್ಲಿ ಮನುಷ್ಯರು ಅಲ್ಪರಾಗಿಬಿಡುತ್ತಾರೆ. ತೀರ್ಥಯಾತ್ರೆ, ನಿಮ್ಮ ಸಣ್ಣತನ ಅರಿತುಕೊಳ್ಳಲು ಸಹಾಯ ಮಾಡುವ ಒಂದು ಪ್ರಕ್ರಿಯೆ. ನೀವು ಎಷ್ಟೆಷ್ಟು ಸ್ವಇಚ್ಛೆಯಿಂದ ಸಣ್ಣವರಾಗುತ್ತೀರೋ, ನಾನೇನೂ ಅಲ್ಲ ಎಂದು ನಿಮ್ಮನ್ನು ಕಿರಿದಾಗಿಸಿಕೊಳ್ಳುತ್ತೀರೊ ಅಷ್ಟು ದೊಡ್ಡವರಾಗುತ್ತೀರಿ. ಎಲ್ಲರೂ ಎಲ್ಲೆಯಿಲ್ಲದವರಾಗಬೇಕೆಂದು ಬಯಸುತ್ತಾರೆ. ಆ ಉದ್ದೇಶದಲ್ಲಿ ತಪ್ಪಿಲ್ಲ; ವಿಷಯ ಏನೆಂದರೆ ಎಲ್ಲರೂ ತಪ್ಪಾದ ದಿಕ್ಕಿನಲ್ಲಿ ಗಮನಹರಿಸಿದ್ದಾರೆ! ನಾನು ಕರಗಿಹೋದರಷ್ಟೆ ನಾನು ಎಲ್ಲೆ ಇಲ್ಲದವನಾಗಬಹುದು ಎಂದು ತಿಳಿಯಲು ತುಂಬಾ ಅರಿವು ಬೇಕು. ಇದನ್ನು ತಿಳಿಯಲು, ದುರದೃಷ್ಟವಶಾತ್, ಹೆಚ್ಚಿನವರು ಅನೇಕ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ.

  ಕೇವಲ ಇಬ್ಬರಿಗೆ ಒಟ್ಟಿಗೆ ಇರಲು ಅದೆಷ್ಟು ಕಷ್ಟ, ಅಲ್ಲವೇ? ಯಾರಿಗಿಂತ ಯಾರು ದೊಡ್ಡವರು? ಅದೇ ಯಾವಾಗಲೂ ಸಮಸ್ಯೆ. ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವನ ದಕ್ಷತೆ ಅದ್ಭುತ, ಆದರೆ, ನಮ್ಮ ತಂತ್ರಜ್ಞಾನ ಎಷ್ಟು ಕಿರಿದು ಎಂದು ಉನ್ನತಮಟ್ಟದ ವಿಜ್ಞಾನಿಗಳಿಗೆ ಗೊತ್ತಿದೆ. ಕೇವಲ ತಂತ್ರಜ್ಞಾನ ಉಪಯೋಗಿಸುವವರಷ್ಟೆ ತಾವು ದೊಡ್ಡವರೆಂದು ನಂಬುತ್ತಾರೆ.

  ಯಾತ್ರಿಗಳು ಮತ್ತು ಪ್ರವಾಸಿಗರ ನಡುವೆ ವ್ಯತ್ಯಾಸ ಇದೆ. ಯಾತ್ರಿಗಳ ಗುರಿ ನಿಗದಿಯಾಗಿರುತ್ತದೆ. ಬದುಕೋ ಇಲ್ಲ ಸಾವು ಎದುರಾಗುತ್ತದೆಯೋ ಅದು ಮುಖ್ಯವಲ್ಲ, ಅವರಿಗೆ ಗೊತ್ತು ತಾವು ಎಲ್ಲಿಗೆ ಹೋಗುತ್ತಿದ್ದೇವೆಂದು. ಪ್ರವಾಸಿಗರು ಹಾಗಲ್ಲ; ಅವರು ಆರಾಮದಾಯಕ ಸ್ಥಳಗಳಿಗೆ ಮಾತ್ರ ಹೋಗುತ್ತಾರೆ. ಅದರಲ್ಲೇನೂ ತಪ್ಪಿಲ್ಲ. ಆದರೆ, ನಾವು ಕೆಲವು ಇತಿಮಿತಿಯಲ್ಲಿ ಬದುಕಿದಾಗ, ಬದುಕು ಕೂಡಾ ಹಲವು ಮಿತಿಯನ್ನು ಹೇರುತ್ತದೆ. ಯಾವಾಗ ನಿಮ್ಮೊಳಗೆ ಯಾವುದೇ ಇತಿಮಿತಿಯಿಲ್ಲದೆ ಬದುಕುತ್ತೀರೋ ಆಗ ಬದುಕು ತನ್ನ ಭಂಡಾರವನ್ನು ತೆರೆಯುತ್ತದೆ.

  ಹಿಮಾಲಯ ಪರ್ವತ ಶ್ರೇಣಿ ಭೂಮಿಯ ಮೇಲಿನ ಅತಿ ಕಿರಿಯ, ಅತಿ ನೂತನ, ಅತಿ ದುರ್ಬಲ ಶ್ರೇಣಿ. ಮತ್ತು ಈ ಪರ್ವತ ಶ್ರೇಣಿ ಬೆಳೆಯಲು ನಡೆಸುವ ಹೋರಾಟ ಹಲವು ರೀತಿಯಲ್ಲಿ ಮಾನವನ ಜೀವನಕ್ಕೆ ಸಾಂಕೇತಿಕವಾಗಿದೆ. ಹಿಮಾಲಯದ ತಪ್ಪಲಿನಲ್ಲಿ ನೀವು ಕಾಲಿಟ್ಟ ಕೂಡಲೇ, ಭೂಮಿಯ ಮೇಲಿನ ಅತಿ ಕಿರಿಯ ಜೀವಿ, ಅಂದರೆ ನೀವು, ಹಾಗೂ ಅತಿ ಕಿರಿಯ ಪರ್ವತ ಶ್ರೇಣಿ ಹಿಮಾಲಯ, ಈ ಇಬ್ಬರ ನಡುವೆ ಒಂದು ರೀತಿಯ ಸ್ನೇಹ ಪ್ರಾರಂಭವಾಗುತ್ತದೆ. ಇಬ್ಬರೂ ಇನ್ನೂ ಹೋರಾಡುತ್ತಿದ್ದಾರೆ, ವಿಕಸನಗೊಳ್ಳುತ್ತಿದ್ದಾರೆ, ತಮ್ಮ ಗರಿಷ್ಠ ಮಟ್ಟ ಮುಟ್ಟಲು ಬಯಸುತ್ತಿದ್ದಾರೆ. ಆದರೆ, ಗರಿಷ್ಠ ಮಟ್ಟ ಮುಟ್ಟುವುದು ಹಿಮಾಲಯಕ್ಕೆ ಸುಲಭದಲ್ಲಿ ದಕ್ಕುವುದಿಲ್ಲ. ಬೆಳೆಯುವ ಪ್ರಯತ್ನದಲ್ಲಿ ಅದು ನಿತ್ಯ ತನ್ನನ್ನೇ ತಾನು ಕಳಚಿಕೊಳ್ಳುತ್ತದೆ. ಅಲ್ಲಿ ಭಾರಿ ಪ್ರಮಾಣದ ಭೂಕುಸಿತ, ಹಿಮಪಾತ ಹಾಗೂ ಸ್ಥಿತ್ಯಂತರವಾಗುತ್ತಿರುತ್ತದೆ. ಈ ಎಲ್ಲ ಮೇಲ್ನೋಟಕ್ಕೆ ಕಾಣುವ ಅವ್ಯವಸ್ಥೆ ಏಕೆಂದರೆ ಪರ್ವತ ಶ್ರೇಣಿ ಬೆಳೆದು ಅಂತಿಮ ಎತ್ತರ ತಲುಪಲು ಪ್ರಯತ್ನಿಸುತ್ತಿದೆ.

  ಅದೇ ರೀತಿ ಮನುಷ್ಯರ ಜೀವನ ಸಹ. ನಾವು ಬೆಳೆಯಲು ಶ್ರಮಿಸಿದಾಗ, ನಮ್ಮ ಜೀವನದಲ್ಲಿ ಭೂಕಂಪ, ಭೂಕುಸಿತ ಎಲ್ಲ ನಡೆಯುತ್ತಿರುತ್ತದೆ. ಯಾರ ಜೀವನ ನಿಂತ ನೀರಿನಂತಿರುತ್ತದೋ ಅದು ಸ್ಥಿರ ಹಾಗೂ ಭದ್ರವಾಗಿ ಒಳ್ಳೆಯದಿರುವಂತೆ ಕಾಣುತ್ತದೆ. ಆದರೆ, ನಿರ್ಜೀವವಾಗಿರುತ್ತದೆ. ಯಾರು ಬೆಳೆಯಬೇಕೆಂದು ಶ್ರಮಿಸುತ್ತಾರೋ ಅವರ ಜೀವನದಲ್ಲಿ ಭಾರಿ ಪ್ರಮಾಣದ ಅಲ್ಲೋಲಕಲ್ಲೋಲವಾಗುತ್ತದೆ. ಆದರೆ, ಒಂದು ಸಣ್ಣ ಪ್ರಮಾಣದ ಬೆಳವಣಿಗೆ ಮಾನವನಲ್ಲಿ ನಡೆದರೆ ಆ ಎಲ್ಲ ಅಲ್ಲೋಲಕಲ್ಲೋಲ ಸಾರ್ಥಕ.

  ಮೊದಲ ಹೊಡೆತವು ಅಂದಾಜು ಐವತ್ತು ದಶಲಕ್ಷ ವರ್ಷಗಳ ಹಿಂದೆ ಹಿಮಾಲಯದಲ್ಲಿ ಸಂಭವಿಸಿತು ಮತ್ತು ನಿಧಾನವಾಗಿ ಇದು, ವರ್ಷಕ್ಕೆ ಕೆಲವು ಮಿಲಿಮೀಟರ್ ದರದಲ್ಲಿ ಏರುತ್ತಿದೆ. ಖಂಡದ ಸಮತಲ ಚಲನೆ ವರ್ಷಕ್ಕೆ ಕೆಲವು ಸೆಂಟಿಮೀಟರ್ ಆಗಿದ್ದರೂ, ಲಂಬ ಏರಿಕೆ ವರ್ಷಕ್ಕೆ ಐದು ಮಿಲಿಮೀಟರ್ ಮಾತ್ರ ಎಂದು ಹೇಳಲಾಗುತ್ತದೆ. ನೀವು ಭೌತಿಕ ಯೋಗಕ್ಷೇಮ ಬಯಸುತ್ತಿರಲಿ, ಅಥವಾ ವಿಶೇಷವಾಗಿ ಆಧ್ಯಾತ್ಮಿಕ ಯೋಗಕ್ಷೇಮವಾಗಲಿ, ಇದು ಯಾವಾಗಲೂ ಜೀವನದೊಂದಿಗೂ ಹೀಗೆಯೇ ಇರುತ್ತದೆ. ಅಗಾಧ ಪ್ರಮಾಣದ ಸಮತಲ ಚಟುವಟಿಕೆಯನ್ನು ಹಾಕಿದರೆ, ಸ್ವಲ್ಪ ಲಂಬ ಚಲನೆ ಸಂಭವಿಸುತ್ತದೆ. ಆದ್ದರಿಂದ ಹಿಮಾಲಯದ ಹೋರಾಟಗಳು ಮತ್ತು ಮಾನವರ ಹೋರಾಟಗಳು ಬಹಳ ಆಳವಾದ ಸಂಪರ್ಕ ಹೊಂದಿವೆ.

  ಹೆಚ್ಚಿನ ಜನರು – ನನ್ನ ಅನುಭವದಲ್ಲಿ ಹೇಳುವುದಾದರೆ, ಶೇ. 99.9ರಷ್ಟು ಜನರು – ಬೆಳೆಯಲು ಹೋರಾಡುತ್ತಾರೆ. ಹೋರಾಟವಿಲ್ಲದೆ ಬೆಳೆಯಲಿಕ್ಕೆ ಸಾಧ್ಯವಿಲ್ಲ ಎಂದಲ್ಲ. ಆದರೆ, ಅದಕ್ಕೆ ತುಂಬಾ ಅರಿವು ಬೇಕು, ಅಥವಾ ಸಂಪೂರ್ಣ ವಿಶ್ವಾಸ ಬೇಕು – ಇವೆರಡೇ ದಾರಿಗಳು. ಇಲ್ಲವೆಂದರೆ ಹೋರಾಟ ಅನಿವಾರ್ಯ. ಹಿಮಾಲಯ ಶ್ರೇಣಿ ಇದೇ ಕಾರಣಕ್ಕೆ ಹೋರಾಡುತ್ತಿದೆ. ಅದು ಬೆಳೆಯಲು ಹೋರಾಡುವ ಕಾರಣಕ್ಕಾಗಿಯೇ ದೊಡ್ಡ ಪ್ರಮಾಣದ ಪರ್ವತದ ಭಾಗ ಅದರ ಸುತ್ತವೇ ಕುಸಿಯುತ್ತದೆ. ಅದು ಜಡವಾಗಿ ಬಿಟ್ಟರೆ ಈ ಭೂಕಂಪ ಮತ್ತು ಭೂ ಕುಸಿತ ಸಂಭವಿಸುವುದಿಲ್ಲ. ಆದರೆ, ಅದು ತನ್ನ ಸುರಕ್ಷತೆಯ ಬಲಿ ಕೊಟ್ಟಾದರೂ ಬೆಳೆಯ ಬಯಸುತ್ತದೆ. ಹೆಚ್ಚಿನ ಜನರ ಬೆಳವಣಿಗೆ ನಡೆಯುವುದೂ ಇದೇ ರೀತಿಯಲ್ಲಿ.

  ನನ್ನಲ್ಲಿ ಹಲವು ಬಾರಿ ಕೇಳುತ್ತಾರೆ, ತೀರ್ಥಯಾತ್ರೆಯಿಂದ ನಾವು ಗರಿಷ್ಠ ಲಾಭ ಪಡೆಯುವುದು ಹೇಗೆ? ಯಾತ್ರಿ ಅಥವಾ ಅನ್ವೇಷಕನಾಗುವ ಒಂದು ಸರಳ ವಿಧಾನವೆಂದರೆ ಈ ಲೆಕ್ಕಾಚಾರವನ್ನು ಬಿಟ್ಟುಬಿಡುವುದು, ಏನು ಲಾಭ? ನಿಮಗೇನು ಸಿಗಬೇಕಾಗಿಲ್ಲ. ಬರಿ ಒಂದಷ್ಟು ಸಮಯ ಹಾಳು ಮಾಡುವುದನ್ನು ಕಲಿಯಿರಿ. ಏನೂ ಆಗಬೇಕಾಗಿಲ್ಲ. ಇದು ಆರೋಗ್ಯವಂತರಾಗುವುದಕ್ಕೋ, ಜ್ಞಾನೋದಯ ಪಡೆಯಲೋ ಅಥವಾ ಸ್ವರ್ಗ ಸೇರುವುದರ ಬಗ್ಗೆಯೋ ಅಲ್ಲ. ಯಾವಾಗ ನೀವು ಏನೋ ಆಗುವುದಕ್ಕೆ ಪ್ರಯತ್ನಿಸುವುದಿಲ್ಲವೋ, ಎಲ್ಲೋ ಸೇರಲು ಪ್ರಯತ್ನಿಸುವುದಿಲ್ಲವೋ, ಆಗ ಕೇವಲ ನಿಮ್ಮ ಅಸ್ತಿತ್ವ ಇರುತ್ತದೆ.

  ನಿಮಗೆ ನಿಜವಾದ ವಿಷಯ ಬೇಕಾದಲ್ಲಿ ಲಾಭ ಏನು ಎನ್ನುವ ವ್ಯವಹಾರ ಬಿಡಿ. ಆದರೆ, ಜನರಿಗೆ ಸುಮ್ಮನೆ ಇರಲು ಅಗತ್ಯ ಅರಿವು ಇಲ್ಲದಿರುವುದರಿಂದ ಪರ್ಯಾಯವಾಗಿ ಪ್ರೀತಿಯಿಂದಿರಲು ಸೂಚಿಸಲಾಯಿತು. ಇದು ಏಕೆಂದರೆ, ಪ್ರೀತಿ ಒಂದು ಸ್ಥಿತಿ, ಸ್ವಲ್ಪ ಮಟ್ಟಿಗೆ, ನೀವು ಅಲ್ಲಿ ಲಾಭದ ಬಗ್ಗೆ ಯೋಚಿಸುವುದಿಲ್ಲ. ಆದರೂ ಸಾಮಾನ್ಯವಾಗಿ ಆಳವಾದ ಪ್ರೀತಿ, ಕರುಣೆ ಬೆಳೆಸುವ ಈ ಎಲ್ಲ ಮಾತು ಕೇವಲ, ನನಗೇನು ಸಿಗುತ್ತದೆ? ಎನ್ನುವ ನಿರೀಕ್ಷೆಯನ್ನು ತೆಗೆಯುವುದೇ ಆಗಿದೆ. ಅದು ತುಂಬಾ ಸರಳ: ನೀವು ಇದೊಂದು ಲೆಕ್ಕಾಚಾರ ಬಿಟ್ಟುಬಿಟ್ಟರೆ ಶೇ. 90ರಷ್ಟು ಕೆಲಸ ಮುಗಿಯಿತು. ಉಳಿದ ಶೇ. 10ರಷ್ಟು ತನ್ನಿಂದ ತಾನೇ ಆಗುತ್ತದೆ.

  ಹಿಮಾಲಯ ಯಾತ್ರೆಯ ಉದ್ದೇಶ ನಿಮ್ಮನ್ನು ಶೂನ್ಯವಾಗಿಸುವುದು. ಭಾರಿ ದೊಡ್ಡ ವ್ಯಕ್ತಿಯ ಹಾಗೆ ಜೀವನವನ್ನು ಎದುರುಗೊಂಡರೆ, ನೀವು ಅತ್ಯಂತ ಅಸಹ್ಯವಾದ ವ್ಯಕ್ತಿಯಾಗುತ್ತೀರಿ. ನೀವು ನಿಮ್ಮ ಬಗ್ಗೆಯೇ ತುಂಬಾ ಯೋಚನೆ ಮಾಡಿಕೊಂಡು ಜೀವನ ಸವೆಸಿದರೆ ವಿಧ್ವಂಸಕರಾಗುತ್ತೀರಿ. ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಕೃತಜ್ಞತೆಯಿಂದ ಇಟ್ಟಿರಾದರೆ, ನೀವು ಎಷ್ಟು ಕಿರಿಯ ಎಂದು ಮನಗಂಡರೆ, ಈ ಭೂಮಿಯ ಮೇಲೆ ಯಾತ್ರಿಯ ಥರ ಸೌಮ್ಯವಾಗಿ ನಡೆಯುತ್ತೀರಿ. ಈ ಜೀವನವೇ ನಿಮ್ಮ ತೀರ್ಥಯಾತ್ರೆಯಾಗಬಹುದು.

  (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

  ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

  ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts