ತುಂಬಾ ಆಸೆಯಿಂದ ಪ್ರವಾಸಕ್ಕೆ ಹೋದ ನವದಂಪತಿಗೆ ಹೀಗಾಗಬಾರದಿತ್ತು...

Ayushi Guptha
Published on

ನವದೆಹಲಿ: ಬಿಸಿನೆಸ್​ ಉದ್ದೇಶ ಮಾತ್ರವಲ್ಲದೇ ಕುಟುಂಬ ಪ್ರವಾಸಕ್ಕಾಗಿ ತೆರಳಿದ್ದ ಭಾರತೀಯ ರೈಫಲ್​ ಶೂಟರ್​ ಆಯುಶಿ ಗುಪ್ತಾ ಮತ್ತು ಅವರ ಪತಿ ಸಕ್ಶಮ ಅವರ ವಿದೇಶ ಪ್ರವಾಸ ಇದೀಗ ದುಸ್ವಪ್ನವಾಗಿ ಕಾಡತೊಡಗಿದೆ.

ಜನವರಿಯಲ್ಲಿ ಸಪ್ತಪದಿ ತುಳಿದ ದಂಪತಿ ಕಳೆದು ಒಂದು ತಿಂಗಳಿಂದ ಜಾಂಬಬಿಯಾದ ಲುಸಾಕದಲ್ಲಿ ಸಿಲುಕಿಕೊಂಡಿದ್ದು, ಭಾರತಕ್ಕೆ ಮರಳಲು ಸಾಕಷ್ಟು ಪರದಾಡಿ ಇದೀಗ ನಿಟ್ಟುಸಿರುವ ಬಿಡುವ ಹಂತಕ್ಕೆ ಬಂದಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಮಾರ್ಚ್​ 27ಕ್ಕೆ ದಂಪತಿ ಸ್ವದೇಶಕ್ಕೆ ಆಗಮಿಸಬೇಕಿತ್ತು. ಆದರೆ, ಕರೊನಾ ವೈರಸ್​ ಕಾಟದಿಂದ ಸರ್ಕಾರ ಮಾರ್ಚ್​ 19ರಂದೇ ಮಾರ್ಚ್​ 22ರಿಂದ ಯಾವುದೇ ವಿಮಾನಗಳು ಭಾರತದಲ್ಲಿ ಲ್ಯಾಂಡ್​ ಆಗುವುದಿಲ್ಲ ಎಂದು ಘೋಷಣೆ ಮಾಡಿತ್ತು. ಇದರಿಂದ ಯಾವುದೇ ವಿಮಾನಗಳು ದೊರೆಯದಿದ್ದಾಗ ದಂಪತಿ ಭಾರತೀಯ ಹೈಕಮಿಷನ್​ ಕಚೇರಿಯ ಮೊರೆ ಹೋಗಿತ್ತು. ಆದರೆ, ಯಾವುದೇ ಫಲ ಸಿಗದಿದೇ ದಂಪತಿ ಮತ್ತಷ್ಟು ತೊಂದರೆ ಅನುಭವಿಸುವಂತಾಯಿತು.

ಇದರ ನಡುವೆ ಮಾರ್ಚ್​ 27ಕ್ಕೆ ದಂಪತಿಯ ವೀಸಾ ಅವಧಿ ಮುಗಿದಿದ್ದು, ಸದ್ಯ ತಾತ್ಕಾಲಿಕ ವಸತಿ ಅನುಮತಿ ಆಧಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಸೇವಾ ಅಪಾರ್ಟ್​ಮೆಂಟ್​ನಲ್ಲಿ ದಂಪತಿ ವಾಸಿಸುತ್ತಿದ್ದು, ತಿಂಗಳಿಗೆ ಬರೋಬ್ಬರಿ 2.5 ಲಕ್ಷ ರೂ. ಖರ್ಚಾಗುತ್ತಿರುವುದು ಮತ್ತಷ್ಟು ಚಿಂತೆಗೀಡುಮಾಡಿದೆ.

ಇನ್ನು ಲೂಸಾಕಾದಲ್ಲಿ ಕರೊನಾ ಪರಿಸ್ಥಿತಿ ವಿಚಾರಕ್ಕೆ ಬಂದರೆ ಶನಿವಾರ ತಾನೇ 10 ಪ್ರಕರಣಗಳು ದೃಢಪಟ್ಟಿವೆ. ಇದೂ ಕೂಡ ದಂಪತಿಯ ಚಿಂತೆಗೆ ಕಾರಣವಾಗಿದ್ದು, ತೊಂದರೆಯಲ್ಲಿ ಸಿಲುಕಿದ್ದಾರೆ. ನಾವು ಟಿಕೆಟ್​ ಬುಕ್​ ಮಾಡಲು ಯತ್ನಿಸಿದೆವು. ಆದರೆ, ಪ್ರಯೋಜನವಾಗಲಿಲ್ಲ. ಎಲ್ಲ ವಿಮಾನಗಳು ಈಗಾಗಲೇ ಬುಕ್​ ಆಗಿವೆ ಎನ್ನುತ್ತಾರೆ ಆಯುಶಿ. ಅಂದಹಾಗೆ ಆಯುಶಿ ವಿಶ್ವ ಯೂನಿವರ್ಸಿಟಿ ಗೇಮ್ಸ್​, ಜ್ಯೂನಿಯರ್​ ವಿಶ್ವಕಪ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಲೂಸಾಕದಲ್ಲಿ ಕೋವಿಡ್​- 19 ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವುದಾಗಿ ಕ್ಯಾಬ್​ ಚಾಲಕರೊಬ್ಬರು ತಿಳಿಸಿದರು. ಇಲ್ಲಿನ ವೈದ್ಯಕೀಯ ಸೌಲಭ್ಯಗಳ ಬಗ್ಗೆ ನಮಗೆ ಖಚಿತತೆ ಇಲ್ಲ. ಹೊರಗಡೆ ಹೋಗಿ ಆಹಾರ ಪದಾರ್ಥ ತರಲು ನಾವು ಭಾರಿ ತೊಂದರೆ ತೆಗದುಕೊಳ್ಳುತ್ತಿದ್ದೇವೆ. ಒಂದು ವೇಳೆ ಸೋಂಕು ತಗುಲಿದರೆ ಏನಾಗಲಿದೆ ಎಂಬುದರ ಬಗ್ಗೆ ನಮಗೆ ತುಂಬಾ ಭಯವಿದೆ ಎನ್ನವುದು ಆಯುಶಿ ಅವರು ಆತಂಕ.

ಭಾರತೀಯ ಹೈಕಮಿಷನ್, ವಿದೇಶಾಂಗ ಕಚೇರಿಯಲ್ಲದೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಸಾಕಷ್ಟು ಮೇಲ್​ ಹಾಗೂ ಜ್ಞಾಪನಾ ಪತ್ರಗಳನ್ನು ರವಾನಿಸಿದ್ದೇವೆ. ಆದರೆ, ಈವರೆಗೂ ಯಾವುದೇ ಫಲಿತಾಂಶ ಬಂದಿಲ್ಲ ಎಂದು ಆಯುಶಿ ದೂರಿದ್ದಾರೆ. ಆಯುಶಿ ಅವರು ರಾಷ್ಟ್ರೀಯ ಶೂಟಿಂಗ್​​ ಸ್ಪರ್ಧೆಗಳಲ್ಲಿ ಉತ್ತರ ಪ್ರದೇಶದ ಪ್ರತಿನಿಧಿಯಾಗಿದ್ದಾರೆ.

ವಿದೇಶಾಂಗ ಕಚೇರಿಯ ಕೋವಿಡ್​ ಸಹಾಯವಾಣಿಗೆ ಸಂದೇಶವನ್ನು ರವಾನಿಸುತ್ತೇವೆಂಬ ಪ್ರತ್ಯುತ್ತರವನ್ನು ಮಾತ್ರ ಸ್ವೀಕರಿಸಿದ್ದೇವೆ. ಮೊದಲನೆಯದಾಗಿ ವಿದೇಶಾಂಗ ಸಚಿವಾಲಯ ನಮ್ಮ ಇ-ಮೇಲ್​ ಐಡಿಗಳನ್ನು ಇಲ್ಲಿನ ಹೈಕಮಿಷನ್​ ಕಚೇರಿಗೆ ಕಳುಹಿಸಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಿಂದ ಹೈಕಮಿಷನ್ ಸಿಬ್ಬಂದಿಯೊಂದಿಗೆ ವ್ಯವಹರಿಸುತ್ತಿದ್ದೇವೆ. ಆದರೆ, ನಮಗೆ ಅನುಕೂಲವಾಗುವಂತಹ ಯಾವುದೇ ಪರಿಹಾರ ಯೋಜನೆಗಳ ಫಲಿತಾಂಶ ದೊರೆತಿಲ್ಲ ಎನ್ನುತ್ತಾರೆ ಸಕ್ಶಮ್​. ಅಂದಹಾಗೆ ಸಕ್ಶಮ್​ ಅವರು ಪ್ರಮುಖ ಶಿಕ್ಷಣ ಸಂಸ್ಥೆಗಳಿಗಾಗಿ ಸಲಹಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಖರ್ಚು ದುಬಾರಿಯಾಗುತ್ತಿರುವುದು ಮತ್ತೊಂದು ಚಿಂತೆಯಾಗಿದೆ. ಒಂದು ಬಜೆಟ್​ ಮೇಲೆ ನಾವಿಲ್ಲಿಗೆ ಬಂದೆವು. ಆದರೆ, ಇದೀಗ ನಮಗೆ ಬಜೆಟ್​ ಮೀರಿದ್ದು, ನಮ್ಮ ಉಳಿತಾಯವೆಲ್ಲ ಖರ್ಚಾಗುತ್ತಿದೆ. ಇದರಿಂದ ನಮ್ಮ ಕುಟುಂಬಗಳೂ ಸಹ ಚಿಂತೆಗೀಡಾಗಿದ್ದು, ನಾವೇ ಆದಷ್ಟು ಬೇಗ ಮರಳುವುದನ್ನು ಅವರು ಎದುರು ನೋಡುತ್ತಿದ್ದಾರೆ ಎಂದು ಆಯುಶಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net