

ನವದೆಹಲಿ: ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿನಿಯ ಸಾವಿನ ಕುರಿತು ಅಮೆರಿಕ ಪೊಲೀಸ್ ಸಿಬ್ಬಂದಿ ಮಾಡಿದ ಅಪಹಾಸ್ಯ ಬಹಿರಂಗಗೊಂಡ ಬೆನ್ನಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ಯುಎಸ್ ಸರ್ಕಾರವನ್ನು ತನಿಖೆಗೆ ಒತ್ತಾಯಿಸಿದೆ.
ಜಾಹ್ನವಿ ಕಂದುಲ (23) ಮೃತ ವಿದ್ಯಾರ್ಥಿನಿ. ಕಳೆದ ಜನವರಿಯಲ್ಲಿ ಕೆವಿನ್ ಡೇವ್ ಎಂಬ ಪೊಲೀಸ್ ಅಧಿಕಾರಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಪೊಲೀಸ್ ವಾಹನ ಚಲಾಯಿಸಿಕೊಂಡು ಹೋಗುವಾಗ ರಸ್ತೆ ದಾಟುತ್ತಿದ್ದ ಜಾಹ್ನವಿಗೆ ಡಿಕ್ಕಿಯಾಗಿ ಆಕೆ ಮೃತಪಟ್ಟಿದ್ದಳು. ಜಾಹ್ನವಿ ಅವರು ಸಿಯಾಟಲ್ನ ನಾರ್ಥ್ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಳು.
ಸಿಯಾಟಲ್ ಪೊಲೀಸ್ ಇಲಾಖೆ ಸೋಮವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿದ್ಯಾರ್ಥಿನಿಗೆ ಕಾರು ಡಿಕ್ಕಿಯಾದ ಬಳಿಕ ಪೊಲೀಸ್ ಸಿಬ್ಬಂದಿ ಆಕೆಯ ಸಾವನ್ನು ಅಪಹಾಸ್ಯ ಮಾಡಿರುವುದು ಬಹಿರಂಗವಾಗಿದೆ. ಪೊಲೀಸ್ ಅಧಿಕಾರಿಗಳು ಧರಿಸಿದ್ದ ಬಾಡಿವೋರ್ನ್ ಕ್ಯಾಮೆರಾದಲ್ಲಿ ಎಲ್ಲವೂ ಸೆರೆಯಾಗಿತ್ತು.
ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರಿಗೆ ಕರೆ ಮಾಡಿದ್ದ ಕಾರಿನಲ್ಲಿದ್ದ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಔಡೆರೆರ್ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಆದರೆ, ಬಾಡಿ ವೋರ್ನ್ ಕ್ಯಾಮೆರಾ ಇರುವುದನ್ನು ಗಮನಿಸದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದರು. ಆಕೆ ಸತ್ತು ಹೋದಳು ಎಂದು ಹೇಳಿ ಡೇನಿಯಲ್ ಔಡೆರೆರ್ ಗಹಗಹಿಸಿ ನಕ್ಕಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ, ಜಾಹ್ನವಿ ಸಾಮಾನ್ಯ ವ್ಯಕ್ತಿ ಎಂದು ಹೇಳಿದ್ದಾರೆ. ಕೇವಲ ಒಂದು ಚೆಕ್ ಬರೆದರೆ ಮುಗಿತು, ಅದು ಕೂಡ ಹನ್ನೊಂದು ಸಾವಿರ ಡಾಲರ್ ಎಂದು ಹೇಳಿ ನಕ್ಕಿದ್ದಾರೆ. ಏನೇ ಇರಲಿ ಆಕೆಗೆ 26 ವರ್ಷ. ಆಕೆ ಸೀಮಿತ ಮೌಲ್ಯವನ್ನು ಹೊಂದಿದ್ದಳು ಎಂದು ಅಪಘಾತವನ್ನು ಅಪಹಾಸ್ಯ ಮಾಡಿರುವುದು ಬಾಡಿವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇದೀಗ ಬಹಿರಂಗವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸವು ಜಾಹ್ನವಿ ಸಾವು ತುಂಬಾ ದುಃಖಕರ ಎಂದಿದೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ದುರಂತದಲ್ಲಿ ಭಾಗಿಯಾದವರ ವಿರುದ್ಧ ಸಮಗ್ರ ತನಿಖೆ ಮತ್ತು ಕ್ರಮಕ್ಕಾಗಿ ಸಿಯಾಟಲ್ ಮತ್ತು ವಾಷಿಂಗ್ಟನ್ ರಾಜ್ಯದ ಸ್ಥಳೀಯ ಅಧಿಕಾರಿಗಳು ಹಾಗೂ ವಾಷಿಂಗ್ಟನ್ ಡಿಸಿಯ ಹಿರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ ಎಂದು ದೂತವಾಸ ಕಚೇರಿ ಎಕ್ಸ್ನಲ್ಲಿ ತಿಳಿಸಿದೆ.
ಜಾಹ್ನವಿ ಕಂದುಲಾ ಅವರು ಆಂಧ್ರಪ್ರದೇಶದ ಮೂಲದವರು. ಸಿಯಾಟಲ್ನ ನಾರ್ಥ್ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. ನಮ್ಮ ಕುಟುಂಬಕ್ಕೆ ಹೇಳಲು ಏನೂ ಇಲ್ಲ. ಈ ಪುರುಷರ ಹೆಣ್ಣುಮಕ್ಕಳು ಅಥವಾ ಮೊಮ್ಮಕ್ಕಳಿಗೆ ಏನಾದರೂ ಮೌಲ್ಯವಿದೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ. ಜೀವನವು ಅಂದರೆ ಒಂದು ಜೀವನ ಅಷ್ಟೇ ಎಂದು ಜಾಹ್ನವಿ ಅವರ ಚಿಕ್ಕಪ್ಪ ಅಶೋಕ್ ಕಂದುಲಾ ನೋವಿನ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್)