

ಚೆನ್ನೈ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಮತ್ತು ಮಾಲಿವುಡ್ನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಶಾಲೂ ಶಾಮು ಸೇರಿಕೊಂಡಿದ್ದಾರೆ.
ನಟ ಶಿವಕಾರ್ತಿಕೇಯನ್ ಅಭಿನಯದ ತಮಿಳಿನ ಸೂಪರ್ ಹಿಟ್ “ವರೂತಪದತ ವಾಲಿಬರ್ ಸಂಗಮ” ಸಿನಿಮಾದಲ್ಲಿ ನಟಿಸಿದ ಬಳಿಕ ಖ್ಯಾತಿಯನ್ನು ಹೆಚ್ಚಿಕೊಂಡಿರುವ ನಟಿ ಶಾಲೂ ಶಾಮು, ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೇಗಡಿ, ತಮಿಳುಕು ನುಮಾ ಉತ್ಸುತ್, ಮಿಸ್ಟರ್ ಲೋಕಲ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಶಾಲೂ ಹೆಚ್ಚು ಸದ್ದು ಮಾಡುತ್ತಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶಾಲೂ, ಇನ್ಸ್ಟಾಗ್ರಾಂನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಯಾವಾಗಲೂ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಏರಿಸುತ್ತಿರುತ್ತಾರೆ. ಅವರ ಇನ್ಸ್ಟಾಗ್ರಾಂ ಪೂರ್ತಿ ಗ್ಲಾಮರಸ್ ಫೋಟೋಗಳೇ ತುಂಬಿ ಹೋಗಿವೆ.
ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ಶಾಲೂ ಶಾಮು ತಮಗಾದ ಕಾಸ್ಟಿಂಗ್ ಕೌಚ್ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಟಾಲಿವುಡ್ ಸೂಪರ್ಸ್ಟಾರ್ ವಿಜಯ್ ದೇವರಕೊಂಡ ಸಿನಿಮಾದ ನಿರ್ದೇಶಕರೊಬ್ಬರು ಅವರ ಮನೆಗೆ ಆಹ್ವಾನಿಸಿದ್ದನ್ನು ಶಾಲೂ ಬಹಿರಂಪಡಿಸಿದ್ದಾರೆ. ಆದರೆ, ನಿರ್ದೇಶಕನ ಹೆಸರಾಗಲಿ ಅಥವಾ ಯಾವ ಸಿನಿಮಾ ಎಂದು ಶಾಲೂ ಶಾಮು ಬಹಿರಂಗಪಡಿಸಿಲ್ಲ.
ಸಿನಿಮಾ ಒಂದರಲ್ಲಿ ನಟಿಸಲು ನನಗೆ ಆಫರ್ ಮಾಡಿದರು. ಪಾತ್ರದ ಬಗ್ಗೆ ಮಾತನಾಡಲು ಅವರಿದ್ದ ಸ್ಥಳಕ್ಕೆ ಕರೆದರು. ಬರುವಾಗ ಸೀರೆಯನ್ನು ಹುಟ್ಟಿಕೊಂಡು ಬರುವಂತೆ ಹೇಳಿದರು. ಒಳ್ಳೆಯ ಅವಕಾಶ ಸಿಗಲಿದೆ ಎಂಬ ಆಸೆಯಿಂದ ಅವರು ಕೊಟ್ಟ ವಿಳಾಸಕ್ಕೆ ಸಂತೋಷವಾಗಿಯೇ ಹೋದೆ. ಒಳಗಡೆ ಹೋಗುತ್ತಿದ್ದಂತೆ ಫ್ಯಾಮಿಲಿ ಫೋಟೋ ನೋಡಿದೆ. ಅದು ನಿರ್ದೇಶಕನ ಮನೆ ಎಂಬುದು ಆ ಕ್ಷಣಕ್ಕೆ ನನಗೆ ಅರ್ಥವಾಯಿತು.
ಮನೆಯವರು ಯಾರು ಕಾಣಿಸುತ್ತಿಲ್ಲ, ಎಲ್ಲರು ಎಲ್ಲಿ ಹೋದರು ಎಂದು ಪ್ರಶ್ನೆ ಮಾಡಿದೆ. ಎಲ್ಲರು ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳಿದರು. ಅದನ್ನು ನಾನು ನಂಬಿದೆ. ಬಳಿಕ ನನಗೆ ಒಂದು ಗ್ಲಾಸ್ ಜ್ಯೂಸ್ ನೀಡಿದರು. ಅದನ್ನು ಕುಡಿದು ಟೇಬಲ್ ಮೇಲೆ ಇಟ್ಟೆ. ಈ ವೇಳೆ ಸಿನಿಮಾ ಪಾತ್ರದ ಬದಲು ಬೇರೆ ವಿಚಾರಗಳನ್ನೇ ಹೆಚ್ಚಾಗಿ ಮಾತನಾಡುತ್ತಿದ್ದರು. ಏನೋ ತಪ್ಪು ನಡೆಯುತ್ತಿದೆ ಅನಿಸಿತು. ಇದರಿಂದ ಭಯವಾಗಿ ಬೆವರಲು ಆರಂಭಿಸಿದೆ. ಇದನ್ನು ನೋಡಿದ ನಿರ್ದೇಶಕ ಬೆಡ್ರೂಮ್ಗೆ ಕರೆದರು. ಬೆಡ್ರೂಮ್ನಲ್ಲಿ ಎಸಿ ಇದೆ ಎಂದನು. ಇದರಿಂದ ಭಯಗೊಂಡು ನಾನು ಅಲ್ಲಿಂದ ಹೊರಟು ಬಂದೆ ಎಂದು ಶಾಲೂ ಶಾಮು ಹೇಳಿದ್ದಾರೆ. (ಏಜೆನ್ಸೀಸ್)