

ವಾಷಿಂಗ್ಟನ್: ಏಲಿಯನ್ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್ಗಳ ಸಂಗತಿ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಇದೀಗ ಹಿಂದೆಂದೂ ಕೇಳಿರದ ಘಟನೆಯೊಂದು ನಡೆದಿದೆ. ಅದೇನೆಂದರೆ, ಅಮೆರಿಕದ ಮೆಕ್ಸಿಕೋ ಕಾಂಗ್ರೆಸ್, ಮಂಗಳವಾರ ತಮ್ಮ ನಗರದಲ್ಲಿ ವಿಚಿತ್ರ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮ ಇದೀಗ ಭೂಮ್ಯತೀತ ಅಥವಾ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ.
ಆನ್‌ಲೈನ್‌ನಲ್ಲಿ ನೇರ ಪ್ರಸಾರದಲ್ಲಿ ಗುರುತಿಸಲಾಗದ ಅಸಂಗತ ವಿದ್ಯಮಾನಗಳ ಕುರಿತು ಕಾಂಗ್ರೆಸ್ ವಿಚಾರಣೆಯ ಸಮಯದಲ್ಲಿ ಏಲಿಯನ್ಗಳದ್ದು ಎನ್ನಲಾದ ಎರಡು ಶವಗಳನ್ನು ಪ್ರದರ್ಶನ ಮಾಡಲಾಯಿತು. ಈ ಎರಡೂ ಶವಗಳನ್ನು ಪೆರುವಿನ ಕುಸ್ಕೋ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಇದೀಗ ಮೆಕ್ಸಿಕೋ ನಗರದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಮಾನವೇತರ ಅನ್ಯಗ್ರಹ ಜೀವಿಗಳ ಶವಗಳು 1000 ವರ್ಷದಷ್ಟು ಹಳೆಯದ್ದು ಎಂದು ಎನ್ನಲಾಗಿದೆ. ಪಳೆಯುಳಿಕೆಗೊಂಡ ಅವಶೇಷಗಳನ್ನು ಎರಡು ಮರದ ಪೆಟ್ಟಿಗೆಯಲ್ಲಿ ಇಟ್ಟು ಪತ್ರಕರ್ತ ಮತ್ತು ಯುಎಫ್ಒಲಜಿಸ್ಟ್ ಜೈಮ್ ಮೌಸ್ಸಾನ್ ಅವರು ಪ್ರದರ್ಶನ ಮಾಡಿದರು. ಅಮೇರಿಕನ್ ಫಾರ್ ಸೇಫ್ ಏರೋಸ್ಪೇಸ್ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮಾಜಿ ಯುಎಸ್ ನೌಕಾಪಡೆಯ ಪೈಲಟ್ ರಯಾನ್ ಗ್ರೇವ್ಸ್ ಸಹ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದೇ ವೇಳೆ ಮಾತನಾಡಿದ ಜೈಮ್ ಮೌಸ್ಸಾನ್, ಈ ಮಾದರಿಗಳು ನಮ್ಮ ಭೂಮಿಯ ವಿಕಾಸದ ಭಾಗವಲ್ಲ ಮತ್ತು UFO ಅಥವಾ ಹಾರುವ ತಟ್ಟೆಗಳ ಅವಶೇಷಗಳ ನಂತರ ಕಂಡುಬಂದ ಜೀವಿಗಳಲ್ಲ. ಇವು ಡಯಾಟಮ್ [ಪಾಚಿ] ಗಣಿಗಳಲ್ಲಿ ಕಂಡುಬಂದವು. ಆ ನಂತರ ಪಳೆಯುಳಿಕೆಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ಈ ಎರಡು ಶವಗಳ ಡಿಎನ್‌ಎ ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಇತರ ಡಿಎನ್‌ಎ ಮಾದರಿಗಳಿಗೂ ಹೋಲಿಸಲಾಗಿದೆ. ಶೇ. 30ರಷ್ಟು ಡಿಎನ್‌ಎ ಮಾದರಿಯು "ಅಜ್ಞಾತ" ಎಂದು ಕಂಡುಬಂದಿದೆ ಎಂದು ಮೌಸನ್, ಮೆಕ್ಸಿಕೋ ಕಾಂಗ್ರೆಸ್‌ಗೆ ತಿಳಿಸಿದರು. ಇದಲ್ಲದೆ, ಈ ಶವಗಳ ಎಕ್ಸ್-ರೇಗಳನ್ನು ಸಹ ಇದೇ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು, ಇದು ಅಪರೂಪದ ಲೋಹದ ಇಂಪ್ಲಾಂಟ್‌ಗಳೊಂದಿಗೆ ದೇಹದೊಳಗೆ "ಮೊಟ್ಟೆಗಳು" ಇರುವುದನ್ನು ತೋರಿಸಿತು.
ಮಾನವೇತರ ತಂತ್ರಜ್ಞಾನ ಮತ್ತು ಮಾನವೇತರ ಘಟಕಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ. ನಾವು ಮಾನವೀಯತೆಯನ್ನು ಒಂದುಗೂಡಿಸುವ ವಿಷಯದ ಬಗ್ಗೆ ಮಾತನಾಡುತ್ತೇವೆ ಹೊರತು ನಮ್ಮನ್ನು ಪ್ರತ್ಯೇಕಿಸುವುದರ ಕುರಿತಲ್ಲ. ಈ ವಿಶಾಲ ವಿಶ್ವದಲ್ಲಿ ನಾವು ಒಬ್ಬಂಟಿಯಾಗಿಲ್ಲ, ನಾವು ಈ ವಾಸ್ತವವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಮೌಸ್ಸನ್ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ UFOಗಳು ಮತ್ತು ಗುರುತಿಸಲಾಗದ ಅಸಂಗತ ವಿದ್ಯಮಾನಗಳನ್ನು ಪ್ರದರ್ಶಿಸುವ ಹಲವಾರು ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು. ಇದೀಗ ಈ ಈವೆಂಟ್‌ನ ವಿಡಿಯೋಗಳು ವೈರಲ್ ಆಗಿದ್ದು, ಜನರನ್ನು ನಿಬ್ಬೆರಗಾಗಿಸಿದೆ ಮತ್ತು UFO ಉತ್ಸಾಹಿಗಳಲ್ಲಿ ಭಯ, ಉತ್ಸಾಹ ಮತ್ತು ಕುತೂಹಲವನ್ನೂ ಹುಟ್ಟುಹಾಕಿದೆ. (ಏಜೆನ್ಸೀಸ್)ಪೂರ್ತಿ ವಿಡಿಯೋ ಲಿಂಕ್ ಇಲ್ಲಿದೆ...