More

  ಕೇಂದ್ರದ ಮಧ್ಯಪ್ರವೇಶ ಅಗತ್ಯ: ಕರ್ನಾಟಕದ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು

  ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ಜಲವಿವಾದ ಇತ್ಯರ್ಥಕ್ಕೆ ಕೇಂದ್ರಸರ್ಕಾರ ಮಧ್ಯಪ್ರವೇಶ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ವಣವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಉಂಟಾದಾಗಲೂ ಒಪ್ಪಂದದ ಪ್ರಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಕಷ್ಟಸಾಧ್ಯ. ಆದರೆ ತಮಿಳುನಾಡು ಸರ್ಕಾರ ಒಪ್ಪಂದದ ಪ್ರಕಾರ ನೀರು ಬಿಡುಗಡೆಗೆ ಆದೇಶ ಮಾಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದು ಸಾಮಾನ್ಯವಾಗುತ್ತಿದೆ.

  ಮಳೆ ಸಮೃದ್ಧಿ ಇದ್ದರೆ ಸಮಸ್ಯೆ ಉದ್ಭವಿಸುವುದಿಲ್ಲ. ಮಳೆ ಕೊರತೆಯಾದಾಗ ಮಾತ್ರ ಒಪ್ಪಂದದ ಪ್ರಕಾರ ತಮಿಳುನಾಡಿಗೆ ನೀರು ಹರಿಸುವುದು ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಸಂಕಷ್ಟ ಪರಿಹಾರ ಸೂತ್ರ ಅಗತ್ಯ ಎಂಬುದು ಕರ್ನಾಟಕ ಸರ್ಕಾರದ ವಾದ. ಕರ್ನಾಟಕ ಸರ್ಕಾರದ ಬೇಡಿಕೆ ನ್ಯಾಯಯುತವಾಗಿಯೇ ಇದೆ. ಮಳೆ ಕೊರತೆಯಾಗಿ ಜಲಾಶಯಗಳಲ್ಲೇ ನೀರು ತಳ ಸೇರುವ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸಮಂಜಸವೂ ಅಲ್ಲ, ಸಾಧುವೂ ಅಲ್ಲ.

  ಈ ವರ್ಷ ಮಳೆ ಕೊರತೆಯಿಂದಾಗಿ ಕಾವೇರಿ ಕಣಿವೆ ಪ್ರದೇಶಗಳಲ್ಲಿ ನೀರಿನ ತೀವ್ರ ಅಭಾವ ಇದೆ. ಇಂಥ ಪರಿಸ್ಥಿತಿಯಲ್ಲಿ ಸೆ. 13ರಿಂದ 15 ದಿನಗಳವರೆಗೆ ದಿನಕ್ಕೆ ಐದು ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಶಿಫಾರಸು ಮಾಡಿದೆ.

  ತಕ್ಷಣ ನೀರು ಬಿಡುಗಡೆಗೆ ಒತ್ತಡ ಹಾಕುತ್ತಿರುವ ತಮಿಳುನಾಡು ಸರ್ಕಾರ, ಸೆಪ್ಟೆಂಬರ್ ತಿಂಗಳಿನಲ್ಲಿ 36 ಟಿಎಂಸಿ ನೀರು ಬಿಡುಗಡೆ ಖಚಿತಪಡಿಸಬೇಕು. ಪ್ರಾಧಿಕಾರದ ಆದೇಶದ ಪ್ರಕಾರ ಕರ್ನಾಟಕ ದಿನಕ್ಕೆ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ತಮಿಳುನಾಡಿನಲ್ಲಿ ಒಳಹರಿವಿನ ಪ್ರಮಾಣ ದಾಖಲಾಗಿದ್ದು, ಸುಮಾರು ಒಂದೂವರೆ ಸಾವಿರ ಕ್ಯೂಸೆಕ್ ಕಡಿಮೆ ಹರಿಸಿದೆ. ಈ ಬಾಕಿ ನೀರನ್ನೂ ಸೇರಿಸಿ ಪ್ರಾಧಿಕಾರದ ಆದೇಶದಂತೆ ನೀರು ಬಿಡುಗಡೆ ಮಾಡಬೇಕು ಎಂಬ ಹಠಕ್ಕೆ ಬಿದ್ದಿದೆ.

  ಈ ಹಿಂದೆ ತಮಿಳುನಾಡು ಸರ್ಕಾರದ 24 ಸಾವಿರ ಕ್ಯೂಸೆಕ್ ನೀರಿನ ಬೇಡಿಕೆ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಜಲಕ್ಷಾಮ ಪರಿಸ್ಥಿತಿ ಪರಿಗಣನೆಗೆ ತೆಗೆದುಕೊಂಡು ಐದು ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಆದೇಶ ಮಾಡಿತ್ತು.

  ಈಗಿನ ಪರಿಸ್ಥಿತಿಯಲ್ಲಿ ದಿನಕ್ಕೆ ಐದು ಕ್ಯೂಸೆಕ್ ನೀರು ಬಿಡುಗಡೆ ಮಾಡುವುದೂ ಕಷ್ಟ. ತಮಿಳುನಾಡು ಸರ್ಕಾರದ ಬೇಡಿಕೆಯಂತೆ ನೀರು ಬಿಡುಗಡೆ ಮಾಡುವ ಪರಿಸ್ಥಿತಿಯೂ ಇಲ್ಲ. ತಮಿಳುನಾಡು ಸರ್ಕಾರ ತಮ್ಮ ರಾಜ್ಯದ ಅಲ್ಪಾವಧಿ ಬೆಳೆ ರಕ್ಷಣೆಗೆ ಕಾವೇರಿ ನೀರು ಬಿಡುಗಡೆಗೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಪದೇಪದೆ ಕೇಂದ್ರದ ಬಳಿ ಹೋಗುತ್ತಿದೆ. ತಮಿಳುನಾಡು ಸರ್ಕಾರದಂತೆಯೇ ಕರ್ನಾಟಕ ಸರ್ಕಾರದ ಮೇಲೂ ಕುಡಿಯುವ ನೀರು ಪೂರೈಕೆ ಹಾಗೂ ರಾಜ್ಯದ ಕಾವೇರಿ ಕಣಿವೆ ಪ್ರದೇಶದ ಬೆಳೆ ರಕ್ಷಣೆ ಮಾಡಬೇಕಾದ ಹೊಣೆ ಇದೆ. ಜಲಕ್ಷಾಮ ಸಂದರ್ಭದಲ್ಲಿನ ಪರಿಸ್ಥಿತಿಯಲ್ಲಿ ಕರ್ನಾಟಕದ ರೈತರ ಹಿತವನ್ನು ನಿರ್ಲಕ್ಷಿಸಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕು ಎಂಬುದು ನ್ಯಾಯೋಚಿತವಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕಿದೆ.

  ರೈತರ ಕೋಟಿಗಟ್ಟಲೆ ಹಣ ದುರ್ಬಳಕೆ: ಉಪಾಧ್ಯಕ್ಷನಿಂದಲೇ ದೂರು ದಾಖಲು; ಸಾರವಾಡ ಪಿಕೆಪಿಎಸ್‌ನಲ್ಲಿ ಭಾರಿ ಭ್ರಷ್ಟಾಚಾರ

  ಬಿಎಂಟಿಸಿ ಬಸ್​ನಲ್ಲಿ ಸಂಚರಿಸಿದ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ; ಪೊಲೀಸ್ ಕಮಿನಷರ್ ಪ್ರತಿಕ್ರಿಯೆ ಹೀಗಿತ್ತು..

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts