

ನವದೆಹಲಿ: ಮಹಾಮರಿ ಕರೊನಾ ವೈರಸ್ನಿಂದ ಕಂಗೆಟ್ಟಿರುವ ಭಾರತವು ಈಗಾಗಲೇ ಆರ್ಥಿಕ ಚೇತರಿಕೆಯ ಹಸಿರು ಚಿಗುರನ್ನು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಇಂಡಿಯಾ ಗ್ಲೋಬಲ್ ವೀಕ್-2020 ಕಾರ್ಯಕ್ರಮ ಉದ್ಘಾಟನಾ ಭಾಷಣ ಮಾಡಿ, ಭಾರತದ ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧ್ಯತೆಗಳು ಹಾಗೂ ಅವಕಾಶಗಳಿವೆ. ಕೃಷಿಯಲ್ಲಿನ ನಮ್ಮ ಸುಧಾರಣೆಯು ಸಂಗ್ರಹಣೆ ಮತ್ತು ಲಾಜಿಸ್ಟಿಕ್ಸ್ನಲ್ಲಿ ಹೂಡಿಕೆ ಮಾಡಲು ಆಕರ್ಷಕ ಹೂಡಿಕೆ ಅವಕಾಶವನ್ನು ಒದಗಿಸಿದೆ ಎಂದು ತಿಳಿಸಿದರು.
ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ. ಬಂಡವಾಳ ಹೂಡಲು ಜಗತ್ತಿನ ಎಲ್ಲ ಕಂಪನಿಗಳಿಗೂ ನಾವು ಕೆಂಪು ಹಾಸಿನ ಸ್ವಾಗತ ನೀಡಿದ್ದೇವೆ. ಇಂತಹ ಅವಕಾಶ ಇರುವುದು ಕೆಲವೇ ದೇಶಗಳಲ್ಲಿ, ಅವುಗಳಲ್ಲಿ ಭಾರತವು ಸಹ ಒಂದಾಗಿದೆ ಎಂದರು.
ಇದೇ ವೇಳೆ ಕರೊನಾ ವೈರಸ್ ವಿಚಾರವಾಗಿ ಮಾತನಾಡಿ, ಭಾರತದ ಔಷಧಿಯ ಉದ್ಯಮ ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿನ ಆಸ್ತಿ ಎಂಬುದನ್ನು ಮಹಾಮಾರಿ ಕರೊನಾ ಪ್ರದರ್ಶಿಸಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆತ್ಮನಿರ್ಭರ ಭಾರತ ಎಂಬುದು ಸ್ವಯಂ ಒಳಗೊಂಡಿರುವ ಅಥವಾ ಜಗತ್ತಿಗೆ ಮುಕ್ತವಾಗಿರದೇ ಇರುವುದು ಎಂದರ್ಥವಲ್ಲ. ಇದು ಸ್ವಾವಲಂಬಿ ಮತ್ತು ಸ್ವಯಂ-ಉತ್ಪಾದನೆಯಷ್ಟೇ. ಜಾಗತಿಕ ಒಳಿತಿಗಾಗಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಭಾರತವು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಇದು ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ಭಾರತವಾಗಿದೆ ಎಂದರು.