

ಒಟ್ಟಾವಾ: ಚೀನಾ ಹಾಗೂ ಕೆನಡಾದ ನಡುವಿನ ರಾಯಭಾರ ಸಂಬಂಧ ಹಳಸಿದೆ. ಇದೀಗ ಇನ್ನೊಂದು ಹಂತ ಕೆಳಕ್ಕೆ ಇಳಿದಿದೆ. ಹಾಂಗ್ಕಾಂಗ್ ಜತೆಗಿನ ಹಸ್ತಾಂತರ ಒಪ್ಪಂದವನ್ನು ಕೆನಡಾ ರದ್ದುಗೊಳಿಸಿದೆ.
ಹಾಂಗ್ಕಾಂಗ್ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸುವ ಉದ್ದೇಶದಿಂದ ಚೀನಾ ಜಾರಿಗೆ ತಂದಿರುವ ಭದ್ರತಾ ಕಾಯ್ದೆಯನ್ನು ವಿರೋಧಿಸಿ ಕೆನಡಾ ಈ ಕ್ರಮಕ್ಕೆ ಮುಂದಾಗಿದೆ.
ಈ ರದ್ದು ಆದೇಶ ಈ ಕ್ಷಣದಿಂದಕಲೇ ಜಾರಿಗೆ ಬರಲಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಘೋಷಿಸಿದ್ದಾರೆ. ಮಾತ್ರವಲ್ಲ, ಹಾಂಗ್ಕಾಂಗ್ಗೆ ರಕ್ಷಣಾ ವಲಯದ ಸೂಕ್ಷ್ಮ ಉಪಕರಣಗಳ ರಫ್ತಿಗೆ ಅವಕಾಶ ನೀಡುವುದಿಲ್ಲ ಎಂದೂ ಹೇಳಿದ್ದಾರೆ. ಏಕೆಂದರೆ, ಇವೆಲ್ಲ ಚೀನಾ ಉಪಯೋಗಕ್ಕಾಗಿಯೇ ತರಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಕೆನಡಾದ ಕ್ರಮಕ್ಕೆ ಹಾಂಗ್ಕಾಂಗ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ವಾರಂಟ್ ಮೇರೆಗೆ ಚೀನಾದ ಹುವಾಯ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮೆಂಗ್ ವಾನ್ಝೌನನ್ನು ಕೆನಡಾ ಬಂಧಿಸಿತ್ತು. ಚೀನಾ ಇದಕ್ಕೆ ಪ್ರತಿಯಾಗಿ ಕೆನಡಾದ ಮಾಜಿ ರಾಯಭಾರಿ ಮೈಕಲ್ ಕೊವ್ರಿ ಹಾಗೂ ಉದ್ಯಮಿ ಮೈಕಲ್ ಸ್ಪಾರೋ ಅವರನ್ನು ಬೇಹುಗಾರಿಕೆ ಆರೋಪದಲ್ಲಿ ಬಂಧಿಸಿತ್ತು.
ಇದಾಗಿ 18 ತಿಂಗಳಾದರೂ ಕೆನಡಾ ಪ್ರಜೆಗಳಿಗೆ ಚೀನಾ ರಾಯಭಾರ ಸಂಪರ್ಕವನ್ನು ನೀಡಿಲ್ಲ. ಇದೊಂದು ಪ್ರತೀಕಾರದ ಕ್ರಮವೆಂದೇ ಬಣ್ಣಿಸಲಾಗಿದೆ. ಈ ವಿವಾದವನ್ನು ಬಗೆಹರಿಸಕೊಳ್ಳುವಂತೆ ಕೆನಡಾ ಪ್ರಧಾನಿ ಮೇಲೆ ಒತ್ತಡ ಬಂದರೂ ಜಸ್ಟಿನ್ ಅದಕ್ಕೆ ಮಣಿದಿಲ್ಲ. ಚೀನಾದ ಒತ್ತೆಯಾಳು ರಾಯಭಾರತ್ವದ ಕಳ್ಳಾಟ ಜಗತ್ತಿಗೆ ತಿಳಿಸುವುದೇ ಇದರ ಉದ್ದೇಶವಾಗಿದೆ ಎಂದು ಕೆನಡಾ ಸ್ಪಷ್ಟಪಡಿಸಿದೆ.