

ನವದೆಹಲಿ: ಆ ದಂಪತಿಗೆ ಭಾರತದ ಮೇಲೆ ಅದೆಷ್ಟರ ಮಟ್ಟಿಗೆ ಪ್ರೀತಿ ಎಂದರೆ ಮಗಳಿಗೆ ಅವರು ಇಂಡಿಯಾ ಎಂದು ಹೆಸರಿಟ್ಟಿದ್ದಾರೆ. ಎಂಥ ಸುಯೋಗವೆಂದರೆ ಅವರಿಗೆ ಮತ್ತೆ ಭಾರತದಲ್ಲಿಯೇ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ವರ್ಚುವಲ್ ಸಮಾರಂಭದಲ್ಲಿ ವಿವಿಧ ದೇಶಗಳ ರಾಜತಾಂತ್ರಿಕರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ತಮ್ಮ ಪ್ರಮಾಣ ಪತ್ರಗಳನ್ನು ಸಲ್ಲಿಸಿದರು. ನ್ಯೂಜಿಲೆಂಡ್, ಉಜ್ಬೆಕಿಸ್ತಾನ್ ಹಾಗೂ ಭಾರತಕ್ಕೆ ಇಂಗ್ಲೆಂಡ್ನ ಹೈಕಮೀಷನರ್ ಆಗಿ ನೇಮಿಸಲ್ಪಟ್ಟ ಸರ್ ಫಿಲಿಫ್ ಬಾರ್ಟನ್ ಪ್ರಮಾಣ ಪತ್ರ ಅಥವಾ ಸನ್ನದುಗಳನ್ನು ಸಲ್ಲಿಸಿದರು.
ಫಿಲಿಪ್ ಬಾರ್ಟನ್ ತಾಯಿ ಶೀಮ್ಲಾದಲ್ಲಿ ಜನಿಸಿದವರು. ಜತೆಗೆ, 1990ರಲ್ಲಿ ಫಿಲಿಫ್ ಅವರನ್ನು ರಾಯಭಾರಿಯಾಗಿ ದೆಹಲಿಯಲ್ಲಿ ನಿಯೋಜಿಸಲಾಗಿತ್ತು. ಪತ್ನಿ ಅಮಂಡಾ ಅವರನ್ನು ಇಲ್ಲಿಯೇ ಭೇಟಿಯಾಗಿದ್ದು. ಇಲ್ಲಿಯೇ ಒಟ್ಟಿಗೆ ಕೆಲಸ ಮಾಡಿದ್ದು. ಹಾಗೂ ನಮ್ಮ ಮಗಳಿಗೆ ಇಂಡಿಯಾ ಎಂದೇ ಹೆಸರಿಟ್ಟಿದ್ದೇವೆ ಎಂದು ಭಾರತದೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧವನ್ನು ಈ ವೇಳೆ ಫಿಲಿಫ್ ಸ್ಮರಿಸಿಕೊಂಡರು.
ನಾನು ಮತ್ತೆ ಭಾರತಕ್ಕೆ ಹೈಕಮಿಷನರ್ ಆಗಿ ಬರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಪ್ರಧಾನಿ ಮೋದಿ ಬಣ್ಣಿಸಿದಂತೆ ಭಾರತ- ಬ್ರಿಟನ್ ನಡುವಿನ ಅವಿಚ್ಛಿನ್ನ ಬಾಂಧವ್ಯವನ್ನು ವೃದ್ಧಿಸುವಲ್ಲಿ ಶ್ರಮಿಸುವುದಾಗಿ ಹೇಳಿದರು.