

ಮಂಡ್ಯ: ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸಿದಲ್ಲದೇ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಹದ್ದು ಮೀರಿದ ವರ್ತನೆ ತೋರಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. 10 ಕೋಟಿ ರೂ. ವೆಚ್ಚದಲ್ಲಿ ಅರಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆ ಹಾಗೂ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಇಂದು ನಡೆಯುತ್ತಿತ್ತು.
ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲೇ ತೆರವು ಕಾರ್ಯಾಚರಣೆ ನಡೆಯುವಾಗ ಮಧ್ಯ ಪ್ರವೇಶಿಸಿದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಬೆಂಬಲಿಗರು ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಾಲಕನನ್ನು ಹಿಡಿದು ಬಂಡಿಸಿದ್ದೇಗೌಡ ಥಳಿಸಿದ್ದಾರೆ. ಸದ್ಯ ಅರಕೆರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಅರಕೆರೆಯು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌರ ಸ್ವಗ್ರಾಮ. ಇದೇ ತಿಂಗಳ 6 ರಂದು ಶ್ರೀರಂಗಪಟ್ಟಣದ PLD ಬ್ಯಾಂಕ್ ಮಳಿಗೆಯ ಉದ್ಘಾಟನೆ ವಿಚಾರದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ಬೆಂಬಲಿಗರ ನಡುವೆ ಹೊಡೆದಾಟವಾಗಿತ್ತು. ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ರಂಪಾಟ ತಾರಕ್ಕೇರಿದೆ. (ದಿಗ್ವಿಜಯ ನ್ಯೂಸ್)