

ಸೊಲ್ಲಾಪುರ: ಪ್ರೀತಿ ಕುರುಡು ಎಂದು ಹೇಳಲಾಗುತ್ತದೆ. ಪ್ರೀತಿಯಲ್ಲಿರುವರು ತಮ್ಮ ಪ್ರೀತಿಯನ್ನು ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಸದ್ಯ, ಯುವತಿಯೊಬ್ಬಳು ಪ್ರೀತಿಗಾಗಿ ಮಾಡಿದ್ದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರೇಮ ವಿವಾಹವನ್ನು ವಿರೋಧಿಸಿದ ತಂದೆಯನ್ನು ಮಗಳೇ ಹೊಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೊಲ್ಲಾಪುರ ಜಿಲ್ಲೆಯ ಮಾದ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಾಕ್ಷಿ ಶಾ, ಚೈತನ್ಯ ಕಾಂಬಳೆ, ಅತಿಶ ಲಂಕೇಶ್ವರ್, ರಾಮ ಪವಾರ್, ಬಂಡು ಅಲಿಯಾಸ್ ಆನಂದ್ ಜಾಧವ್, ಮಯೂರ್ ಚಂದನಶಿವೆ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ:
ಚೈತನ್ಯ ಕಾಂಬಳೆ ಎಂಬಾತನ ಜತೆಗೆ ಸಾಕ್ಷಿ ಶಾ ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಕ್ಷಿ ಬಾರಾಮತಿಯಲ್ಲಿ ಎಂಬಿಎ ಓದುತ್ತಿದ್ದರೆ, ಚೈತನ್ಯ ಮಾಧದಲ್ಲಿ ಕೇಕ್ ಶಾಪ್ ನಡೆಸುತ್ತಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಮದುವೆಯಾಗಿ ಜೀವನವನ್ನು ಪ್ರಾರಂಭಿಸಲು ಬಯಸಿದ್ದರು. ಆದರೆ ಸಾಕ್ಷಿ ತಂದೆ ಮಹೇಂದ್ರ ಶಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಈ ಕಾರಣದಿಂದ ಸಾಕ್ಷಿ ಮತ್ತು ಆಕೆಯ ಪ್ರೇಮಿ ಹೇಗಾದರೂ ಮಾಡಿ ತನ್ನ ತಂದೆಯನ್ನು ಕಟ್ಟಿಹಾಕಬೇಕು ಎಂದು ಯೋಚಿಸಿ, ತಂದೆಯ ಕಾಲುಗಳನ್ನು ಪೆಟ್ಟಾದರೆ ಆತ ಹಾಸಿಗೆಯ ಮೇಲೆಯೇ ಇರುತ್ತಾನೆ. ತಾವು ಓಡಿಹೋಗಿ ಮದುವೆಯಾಗಬಹುದು ಎಂದುಕೊಂಡು ಪ್ಲ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: ‘ಇದೇನು ಬಿನ್ ಲಾಡೆನ್ ಸರ್ಕಾರಾನಾ…?’; ಕಾಂಗ್ರೆಸ್ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಆರ್.ಅಶೋಕ್
ಅದರಂತೆ, ಸಾಕ್ಷಿ ತನ್ನ ತಂದೆಯೊಂದಿಗೆ ಕಾರಿನಲ್ಲಿ ಪುಣೆಯಿಂದ ಶೆಟ್‌ಫಾಲ್‌ಗೆ ಬರುತ್ತಿದ್ದಳು. ಈ ವೇಳೆ ಸಾಕ್ಷಿ ವಡಚಿವಾಡಿ ಗ್ರಾಮದ ಬಳಿ ಬರುತ್ತಿದ್ದಂತೆ ಶೌಚಕ್ಕೆ ಹೋಗುವುದಾಗಿ ಹೇಳಿ ಕಾರು ನಿಲ್ಲಿಸಿದ್ದಾಳೆ. ಈ ವೇಳೆ ನಾಲ್ವರು ಕಾರಿನ ಬಳಿ ಬಂದು, ಶಾಗೆ ಥಳಿಸಿದ್ದಾರೆ. ಈ ವೇಳೆ ಶಾ ತಲೆಗೆ ತೀವ್ರ ಪೆಟ್ಟಾಗಿದ್ದು, ಆತನನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರುದಿನ ಬೆಳಿಗ್ಗೆ ಮದಗ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ದಾಳಿ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಬಗ್ಗೆ ಪೊಲೀಸರು ಯುವತಿಯನ್ನು ಕೇಳಿದಾಗ, ದರೋಡೆ ಮಾಡುವ ಉದ್ದೇಶದಿಂದ ತನ್ನ ತಂದೆ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅಲ್ಲದೇ, ಪೊಲೀಸರನ್ನು ದಾರಿ ತಪ್ಪಿಸುವ ಯತ್ನ ಮಾಡಿದ್ದು, ಅನುಮಾನಗೊಂಡ ಪೊಲೀಸರು ಆಕೆಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ. ಬಳಿಕ ಯುವತಿಯು ಪೊಲೀಸರಿಗೆ ಸತ್ಯಾಂಶ ತಿಳಿಸಿದ್ದು, ಕೇವಲ 12 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಅಧಿಕಾರಿಗಳು ಆಕೆಯ ಪ್ರಿಯಕರ ಮತ್ತು ನಾಲ್ವರು ದಾಳಿಕೋರರನ್ನು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್)