

ಮುಂಬೈ: ಬಂದೂಕು ತೋರಿಸಿ ಮ್ಯೂಸಿಕ್ ಕಂಪನಿಯ ಮುಖ್ಯಸ್ಥನನ್ನು ಅಪಹರಿಸಿರುವ ಆರೋಪದಡಿ ಶಾಸಕನ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಶಾಸಕ ಪ್ರಕಾಶ್ ಸುರ್ವೆಯ ಪುತ್ರ ರಾಜ್ ಸುರ್ವೆ ಮತ್ತು ಇತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಮುಂಬೈನ ಗೋರೆಗಾಂವ್‌ನಲ್ಲಿರುವ ಗ್ಲೋಬಲ್ ಮ್ಯೂಸಿಕ್ ಜಂಕ್ಷನ್ ಕಚೇರಿಗೆ ಸುಮಾರು 10-15 ಜನರು ನುಗ್ಗಿ ಸಂಗೀತ ಕಂಪನಿ ಸಿಇಒ ರಾಜ್‌ಕುಮಾರ್ ಸಿಂಗ್ನನ್ನು ಆತನ ಕಛೇರಿ ಆವರಣದಲ್ಲೇ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕಾಶ್ ಮಹಾರಾಷ್ಟ್ರದ ಸಿಎಂ ಶಿಂಧೆ ಬಣದಲ್ಲಿದ್ದಾರೆ.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ ಕೊಟ್ಟ!
ಇನ್ನು, ಆರೋಪಿಗಳು ಸಂತ್ರಸ್ತ ರಾಜ್ಕುಮಾರ್ನನ್ನು ಅಪಹರಿಸಿ, ಶಾಸಕರ ಕಚೇರಿಗೆ ಕರೆದೊಯ್ದು, ಗನ್ ಪಾಯಿಂಟ್ನಡಿ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಪಹರಣದ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಿಇಒನನ್ನು ಗೂಂಡಾಗಳು ತಮ್ಮೊಂದಿಗೆ ಬರುವಂತೆ ಒತ್ತಾಯಿಸಿದಾಗ ಕಛೇರಿಯಲ್ಲಿ ನಡೆದ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
ಇನ್ನು ಕಿಡ್ನಾಪ್ ಸುದ್ದಿ ತಿಳಯುತ್ತಿದ್ದಂತೆಯೇ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ, ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಅಪಹರಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾರೆ.(ಏಜೆನ್ಸೀಸ್)