ಆರ್​ಸಿಬಿ ಗೆದ್ರೆ ಖುಷಿಪಡಿ, ಸೋತರೆ ಮಾತ್ರ… ಕ್ರಿಕೆಟ್ ಫ್ಯಾನ್ಸ್ ಮಾಡಿಕೊಂಡ ಮನವಿ ಇದು!

WhatsApp Image 2024-05-09 at 4.08.29 PM
Published on

ಧರ್ಮಶಾಲಾ: ಐಪಿಎಲ್​ 2024ರ 17ನೇ ಆವೃತ್ತಿಯ 10 ಬಲಿಷ್ಠ ತಂಡಗಳ ಪೈಕಿ ಟಾಪ್​ 4ರಲ್ಲಿ ಉಳಿಯುವ ತಂಡಗಳಿಗೆ ಮಾತ್ರ ಪ್ಲೇ-ಆಫ್ ಕನಸು ಈಡೇರುತ್ತದೆ. ಅದಕ್ಕಾಗಿ ಎದುರಾಳಿಗಳನ್ನು ಕೇವಲ ಸೋಲಿಸುವುದು ಮಾತ್ರ ಗುರಿಯಲ್ಲ, ಬದಲಿಗೆ ಭಾರೀ ಅಂತರದಿಂದ ಮಣಿಸುವುದೇ ಅತೀ ಮುಖ್ಯ. ಆಡಿರುವ ಇಷ್ಟು ಪಂದ್ಯಗಳ ಪೈಕಿ ರಾಜಸ್ಥಾನ ರಾಯಲ್ಸ್​ ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳು​ ಟಾಪ್ 2 ಸ್ಥಾನಗಳನ್ನು ಭದ್ರವಾಗಿ ಉಳಿಸಿಕೊಂಡಿದ್ದು, ಉಳಿದೆರೆಡು ಸ್ಥಾನಗಳಿಗೆ ಲಕ್ನೋ ಸೂಪರ್ ಜೈಂಟ್ಸ್​, ಸನ್​ರೈಸರ್ಸ್​ ಹೈದರಾಬಾದ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್​, ಪಂಜಾಬ್ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ಮಧ್ಯೆ ಭರ್ಜರಿ ಪೈಪೋಟಿ ಶುರುವಾಗಿದೆ.

ಪ್ಲೇ-ಆಫ್​ ಹೊಸ್ತಿಲಲ್ಲಿ ಇದೀಗ ತಂಡಗಳ ನಡುವೆ ಭಾರೀ ಹಣಾಹಣಿ ನಡೆಯಲಿದ್ದು, ಆಯಾ ತಂಡದ ಆಟಗಾರರು ಶತಾಯಗತಾಯ ಹೋರಾಟ ನಡೆಸಲೇಬೇಕಿದೆ. ಇನ್ನೂ ಈ ಸಾಲಿನಲ್ಲಿ ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿರುವುದು ಕೇವಲ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಮೇಲೆ ಎಂಬುದು ಗಮನಾರ್ಹ. ಪ್ರಾರಂಭದಲ್ಲಿ ಸತತ ಸೋಲುಗಳಿಂದ ಕಂಗಾಲಾಗಿದ್ದ ಆರ್​ಸಿಬಿ, ಇದೀಗ ಕಳೆದ ಮೂರು ಪಂದ್ಯಗಳಿಂದ ಸತತ ಗೆಲುವು ದಾಖಲಿಸಿ, ತಮ್ಮ ಅಭಿಮಾನಿಗಳಲ್ಲಿ ಪ್ಲೇ-ಆಫ್ ಕನಸನ್ನು ಇನ್ನೂ ಹಸಿರಾಗಿಸಿದೆ.

ಈ ಹಿಂದೆ ಆರ್​ಸಿಬಿ ನೀಡಿದ್ದ ಕಳಪೆ ಪ್ರದರ್ಶನದಿಂದ ತೀವ್ರ ಕೆಂಗೆಟ್ಟಿದ್ದ ಬೆಂಗಳೂರು ಅಭಿಮಾನಿಗಳು, ಇವರು ಖಂಡಿತವಾಗಿ ನಮ್ಮ ಆಸೆ ಈಡೇರಿಸುವುದಿಲ್ಲ. ಈ ಸಲವು ಕಪ್ ನಮ್ಮದಲ್ಲ, ಇವರಿಗಾಗಿ ಸ್ಟೇಡಿಯಂಗೆ ಬಂದು ಪ್ರೋತ್ಸಾಹ ನೀಡುವುದು ವೇಸ್ಟ್​, ನಮ್ಮ ಸಮಯ ಎಲ್ಲಾ ಹಾಳು ಎಂದೆಲ್ಲಾ ಛೀಮಾರಿ ಹಾಕಿ, ಹಿಡಿಶಾಪ ಹಾಕುತ್ತಿದ್ದರು. ಇದರಿಂದ ಆರ್​ಸಿಬಿ ತಂಡದ ಆಟಗಾರರು ಸಹ ತೀವ್ರ ಬೇಸರಕ್ಕೆ ಒಳಗಾಗಿದ್ದರು. ಆದರೆ, ಕಳೆದ ಮೂರು ಪಂದ್ಯಗಳಲ್ಲಿ ಪುಟಿದೆದ್ದ ರೀತಿ ನೋಡಿದರೆ, ಪ್ಲೇ-ಆಫ್ ಪ್ರವೇಶಿಸುವುದು ಖಚಿತ ಎನ್ನುವ ಭರವಸೆ ಇದೀಗ ಫ್ಯಾನ್ಸ್​​ಗಳಲ್ಲಿ ಮೂಡಿದೆ.

ಇನ್ನು ಈ ಬೆನ್ನಲ್ಲೇ ಇಂದು ಧರ್ಮಶಾಲಾದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆಲುವು ನೋಡಲೇಬೇಕಿದೆ. ಗೆದ್ದರೆ ಪ್ಲೇ-ಆಫ್​ ಕನಸು ಹಸಿರಾಗಿಯೇ ಉಳಿಯುತ್ತದೆ. ಸದ್ಯ ಇದನ್ನು ಗಮನದಲ್ಲಿಟ್ಟುಕೊಂಡ ಕ್ರಿಕೆಟ್​ ಅಭಿಮಾನಿಗಳು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಡೆ ಈ ಪಂದ್ಯ ಗೆದ್ರೆ ಖಂಡಿತ ಖುಷಿಪಡಿ. ಆದರೆ, ಸೋತರೆ ಮಾತ್ರ ಛೀಮಾರಿ ಹಾಕಬೇಡಿ, ಹಿಯಾಳಿಸಬೇಡಿ. ಲೀಗ್​ನಲ್ಲಿ ಸೋಲು-ಗೆಲುವು ಸಾಮಾನ್ಯ ಎಂದು ಆರ್​ಸಿಬಿ ಫ್ಯಾನ್ಸ್​ಗಳಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net