

ರಾಂಚಿ: ಫೆ.01 ರಂದು ಜಾರ್ಖಂಡ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್ ಸೋರೆನ್ನನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇದೀಗ ತಮ್ಮ ಮೇಲಿರುವ ಆರೋಪ ಸಾಬೀತಾದರೆ ಈ ಕ್ಷಣವೇ ರಾಜಕೀಯ ತೊರೆಯುತ್ತೇನೆ ಎಂದು ಹೇಮಂತ್ ಹೇಳಿದ್ದಾರೆ.
ಇಂದು ನಡೆದ ಜಾರ್ಖಂಡ್ ಸದನದಲ್ಲಿ ಮಾತನಾಡಿದ ಹೇಮಂತ್ ಸೊರೆನ್, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಬಂಧನದಲ್ಲಿ ರಾಜಭವನ ಭಾಗಿಯಾಗಿದೆ ಎಂದು ನೇರವಾಗಿ ಆರೋಪಿಸಿದರು. ನನ್ನ ಮೇಲಿರುವ ಇಂತಹ ಆರೋಪಗಳು ಸಾಬೀತಾದರೆ ತಕ್ಷಣವೇ ರಾಜಕೀಯ ತೊರೆಯುತ್ತೇನೆ ಎಂದರು.
"ಇಂದು ನನ್ನನ್ನು 8.5 ಎಕರೆ ಭೂ ಹಗರಣದ ಆರೋಪದ ಮೇಲೆ ಬಂಧಿಸಲಾಗಿದೆ, ಅವರಿಗೆ ಧೈರ್ಯವಿದ್ದರೆ, ನನ್ನ ಹೆಸರಿಗೆ ನೋಂದಣಿಯಾಗಿರುವ ಜಮೀನಿನ ದಾಖಲೆಗಳನ್ನು ತೋರಿಸಲಿ" ಎಂದು ಹೇಮಂತ್ ಸದನದಲ್ಲಿ ಗುಡುಗಿದರು.
ನಾನಿನ್ನು ಸೋಲನ್ನು ಒಪ್ಪಿಕೊಂಡಿಲ್ಲ ಎಂದ ಜೆಎಂಎಂ ನಾಯಕ ಹೇಮಂತ್ ಸೊರೆನ್, ನನ್ನನ್ನು ಕಂಬಿ ಹಿಂದೆ ಹಾಕುವ ಮೂಲಕ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ಭಾವಿಸಿದರೆ, ಅದು ಅವರ ತಪ್ಪು ಕಲ್ಪನೆ. ಇದು ಜಾರ್ಖಂಡ್ ಎಂದು ಹೇಳಿದ್ದಾರೆ,(ಏಜೆನ್ಸೀಸ್).