

ನವದೆಹಲಿ: ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಗೋವಾ ಬೀಚ್ನಲ್ಲಿ ಸಾಮಾನ್ಯ ಮಹಿಳೆಯೊಬ್ಬರು ಇಂಗ್ಲಿಷ್ ಮಾತನಾಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಶಾಂತ್ ಪಾಟೀಲ್ ಎಂಬುವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ವಿಡಿಯೋದಲ್ಲಿ ಮಹಿಳೆ ಕೋವಿಡ್ ನಂತರದಲ್ಲಿ ಗೋವಾ ಕಡಲತೀರದಲ್ಲಿ ಆಗಿರುವ ಬದಲಾವಣೆಗಳನ್ನು ಸ್ಪಷ್ಟವಾಗಿ ಇಂಗ್ಲಿಷ್ನಲ್ಲಿ ವಿವರಿಸುತ್ತಾರೆ. ಕಪ್ಪು ಕಲ್ಲಿನ ಬಂಡೆಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ವಾಗಟರ್ ಬೀಚ್ ಹೆಸರುವಾಸಿಯಾಗಿದೆ. ವಿಡಿಯೋದಲ್ಲಿ ಮಹಿಳೆ, ಬಳೆಗಳು ಮತ್ತು ಮಣಿಗಳ ನೆಕ್ಲೇಸ್ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ನನಗೆ ಚಿಕ್ಕಂದಿನಿಂದಲೂ ವಾಗಟರ್ ಬೀಚ್ ಪರಿಚಯವಿದೆ. ಕೋವಿಡ್ಗೂ ಮುನ್ನ ಫ್ರಾನ್ಸ್, ಜರ್ಮನ್ ಸೇರಿದಂತೆ ವಿದೇಶಗಳಿಂದ ಜನರು ಬರುತ್ತಿದ್ದರು. ಆದರೆ, ಭಾರತೀಯರೇ ಬರುತ್ತಿರಲಿಲ್ಲ. ಆದರೆ, ಕೋವಿಡ್ ಬಳಿಕ ಭಾರತೀಯರು ಸಹ ಹೆಚ್ಚಾಗಿ ಬರುತ್ತಿದ್ದಾರೆ. ಎಲ್ಲರೂ ಈ ಸ್ಥಳವನ್ನು ಎಂಜಾಯ್ ಮಾಡುತ್ತಾರೆ. ಸತ್ತ ಮೇಲೆ ನಾವು ಯಾವುದನ್ನೂ ತೆಗದುಕೊಂಡು ಹೋಗುವುದಿಲ್ಲ. ನೆನಪುಗಳು ಮಾತ್ರ ನಮ್ಮೊಂದಿಗೆ ಬರುತ್ತದೆ ಎಂದು ಮಹಿಳೆ ಹೇಳಿದ್ದಾಳೆ.
ಈ ವಿಡಿಯೊ ಈಗಾಗಲೇ ಸಾವಿರಾರು ಲೈಕ್ಗಳು ಮತ್ತು ಕಾಮೆಂಟ್ಗಳನ್ನು ಸ್ವೀಕರಿಸಿದೆ. ಇಂಗ್ಲಿಷ್ ಭಾಷೆಯ ಮೇಲೆ ಮಹಿಳೆಗೆ ಇರುವ ಹಿಡಿತ ಮತ್ತು ಆಕೆಯ ಮಾತನಾಡುವ ಕೌಶಲ್ಯದಿಂದ ವಿಡಿಯೋ ನೋಡುಗರನ್ನು ಆಕರ್ಷಿಸುತ್ತದೆ. ಆಕೆಗೆ ಹೋಲಿಸಿದರೆ ನಮ್ಮ ಇಂಗ್ಲಿಷ್ ಜ್ಞಾನ ಶೂನ್ಯ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಿಂದಾಗಿ ಇಂತಹ ಪ್ರತಿಭೆಗಳು ಬೆಳಕಿಗೆ ಬರುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ. (ಏಜೆನ್ಸೀಸ್)