ಭಾರತ ಏನಾದರೂ ನಮ್ಮ ಮೇಲೆ ದಾಳಿ ಮಾಡಿದರೆ... ಪಾಕ್​ ಮಾಜಿ ಸಚಿವನಿಂದ ಸ್ಫೋಟಕ ಹೇಳಿಕೆ! Pahalgam Terrorists Attack

Pahalgam Terrorists Attack
Published on

Pahalgam Terrorists Attack : ಪಹಲ್ಗಾಮ್ ದಾಳಿಯಿಂದಾಗಿ ಭಾರತ ತೀವ್ರ ದುಃಖಿತವಾಗಿದೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಹೋಗಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಮಂಗಳವಾರ (ಏಪ್ರಿಲ್​ 22) ನಡೆದ ಈ ಹತ್ಯಾಕಾಂಡದಲ್ಲಿ ಇಬ್ಬರು ಸ್ಥಳೀಯರು ಸೇರಿ 26 ಮಂದಿ ದುರಂತವಾಗಿ ಮೃತಪಟ್ಟಿದ್ದಾರೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್​ ಫ್ರಂಟ್​ ಈ ದಾಳಿ ನಡೆಸಿದೆ. ಮತ್ತೊಂದೆಡೆ, ಈ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿರುವ ಪಾಕಿಸ್ತಾನ, ಗಡಿಗಳಲ್ಲಿ ತನ್ನ ಪಡೆಗಳನ್ನು ನಿಯೋಜಿಸಿಕೊಂಡಿದೆ. ಭಾರತ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು ಎಂಬ ಭಯ ಕಾಡುತ್ತಿದೆ.

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಭಾರತವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ಅಥವಾ ಬೆದರಿಕೆ ಹಾಕಿದರೆ, ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಲು ಒಟ್ಟಾಗಿ ನಿಲ್ಲುತ್ತೇವೆ ಎಂದಿದ್ದಾರೆ. ನಾವು ರಾಜಕೀಯವಾಗಿ ಬೇರೆ ಬೇರೆಯಾಗಿದ್ದರೂ ದೇಶಕ್ಕಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ನಮ್ಮ ಮಾತೃಭೂಮಿಯನ್ನು ರಕ್ಷಿಸಲು ನಾವು ಪಾಕಿಸ್ತಾನಿ ಧ್ವಜದ ಕೆಳಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ಫವಾದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಈ ಪೋಸ್ಟ್‌ನಲ್ಲಿ, ಫವಾದ್​ ಹುಸೇನ್​, ಪಹಲ್ಗಾಮ್ ದಾಳಿಯನ್ನು ಖಂಡಿಸಿಲ್ಲ ಮತ್ತು ಉಲ್ಲೇಖಿಸಿಯೂ ಇಲ್ಲ. ಅಮಾಯಕರ ಪ್ರಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.

ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿರುವ ಫವಾದ್, ಮತ್ತೊಂದು ಪೋಸ್ಟ್‌ನಲ್ಲಿ ಮೋದಿ ಸರ್ಕಾರದಿಂದ ತಾಳ್ಮೆಯನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ. ಭಾರತೀಯ ಸಚಿವ ಸಂಪುಟ ತನ್ನ ಭದ್ರತಾ ಸಭೆಯನ್ನು ಮುಕ್ತಾಯಗೊಳಿಸಿದೆ. ಯುದ್ಧಕ್ಕೆ ಉತ್ತೇಜನ ನೀಡುವ ಮತ್ತು ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವ ಮಾಧ್ಯಮ ಕಥೆಗಳಿಗೆ ಅದು ಬಲಿಯಾಗದಿರಲಿ ಎಂದು ನಾವು ಆಶಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಆಗ ಸೈನಿಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಇಂದು ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆ ಸುರಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ರಾಜ್ಯಗಳ ಮತ್ತು ನೇಪಾಳ, ಯುಎಇಯ ತಲಾ ಒಬ್ಬರಂತೆ 26 ಪ್ರವಾಸಿಗರನ್ನು ಭಯೋತ್ಪಾದಕರು ಹೆಸರು ಮತ್ತು ಧರ್ಮವನ್ನು ಕೇಳಿ ಕೊಂದು ಹಾಕಿದ್ದಾರೆ.

ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಭಾರತೀಯ ಭದ್ರತಾ ಸಂಸ್ಥೆಗಳು ದಾಳಿಯ ಹಿಂದಿರುವ ಮೂವರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರೆಲ್ಲರೂ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ. ಅವರನ್ನು ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ.

ಈ ದಾಳಿಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತವು ದಾಳಿಕೋರರನ್ನು ನಿರ್ಮೂಲನೆ ಮಾಡುವುದಷ್ಟೇ ಅಲ್ಲ, ಗಡಿಯಾಚೆಯಿಂದ ಈ ಸಂಚು ರೂಪಿಸಿದವರನ್ನು ಬಿಡುವುದಿಲ್ಲ. ಅವರನ್ನು ಸಹ ಬೇಟೆಯಾಡಲಾಗುವುದು ಎಂದು ಪ್ರತಿಜ್ಞೆ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net