

Pahalgam Terror Attack : ಪ್ರವಾಸಿಗರ ಸ್ವರ್ಗ ಹಾಗೂ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೊಮ್ಮೆ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಿನ್ನೆ (ಏಪ್ರಿಲ್ 22) ನಡೆದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಭೀಕರ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಸೈಫುಲ್ಲಾ ಖಾಲಿದ್ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ನಿಷೇಧಿತ ಲಷ್ಕರ್-ಎ-ತೋಯ್ಬಾ ಸಂಘಟನೆಯ ಅಂಗಸಂಸ್ಥೆಯಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಎಲ್‌ಇಟಿಯ ಉನ್ನತ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಹಾಗೂ ಪಿಒಕೆ ಮೂಲದ ಇಬ್ಬರು ಕಾರ್ಯಕರ್ತರನ್ನು ಹತ್ಯಾಕಾಂಡದ ಮಾಸ್ಟರ್ ಮೈಂಡ್‌ಗಳೆಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ.
ಈ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಗುಜ್ರಾನ್‌ವಾಲಾ ನಗರದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಅಂದರೆ, ಕೇಂದ್ರ ಸರ್ಕಾರ 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಕಾರ್ಯತಂತ್ರದ ಬದಲಾವಣೆಯ ಬಗ್ಗೆ ಖಾಲಿದ್ ಬಹಿರಂಗವಾಗಿ ಹತಾಶೆಯನ್ನು ವ್ಯಕ್ತಪಡಿಸಿದ್ದ. ಕಾಶ್ಮೀರದಲ್ಲಿ ಎಲ್‌ಇಟಿಯ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದ. ಅಲ್ಲದೆ, ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ಖ್ವಾದಂತಹ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಇದಕ್ಕೆ ಕಾರಣ ಎಂದು ಹೇಳಿದ್ದ. ಕಾಶ್ಮೀರ ಶೀಘ್ರದಲ್ಲೇ ತಮ್ಮ ನಿಯಂತ್ರಣಕ್ಕೆ ಬರಲಿದೆ ಎಂದಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಹೊರಬಂದಿವೆ.
ಸೈಫುಲ್ಲಾ ಖಾಲಿದ್ ಅಥವಾ ಸೈಫುಲ್ಲಾ ಕಸೂರಿ ಎಲ್‌ಇಟಿಯ ಉಪ ಮುಖ್ಯಸ್ಥ ಎಂದು ಹೇಳಲಾಗುತ್ತದೆ. ಕಸೂರಿ ಎಲ್‌ಇಟಿ ಸಹ-ಸಂಸ್ಥಾಪಕ ಹಫೀಜ್ ಸಯೀದ್ ಜೊತೆ ಸಂಪರ್ಕ ಹೊಂದಿದ್ದಾನೆಂದು ಹೇಳಲಾಗುತ್ತದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಎರಡು ತಿಂಗಳ ಮೊದಲು, ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್‌ಪುರವನ್ನು ತಲುಪಿದ್ದ. ಅಲ್ಲಿ ಪಾಕಿಸ್ತಾನ ಸೇನೆಯ ದೊಡ್ಡ ಬೆಟಾಲಿಯನ್ ನೆಲೆಗೊಂಡಿತ್ತು ಎಂದು ವರದಿಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಸಭೆಯೊಂದರಲ್ಲಿ ಖಾಲಿದ್ ಭಾರತದ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡಿರುವುದು ಇದೇ ಸಂದರ್ಭದಲ್ಲಿ ಬಹಿರಂಗವಾಗಿದೆ. ಇಂದು 2025, ಫೆಬ್ರವರಿ 2, ನಾನು ಭರವಸೆ ನೀಡುತ್ತೇನೆ. 2026, ಫೆಬ್ರವರಿ 2ರೊಳಗೆ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ, ನಮ್ಮ ಮುಜಾಹಿದ್ದೀನ್‌ಗಳು ದಾಳಿಯನ್ನು ತೀವ್ರಗೊಳಿಸುತ್ತಾರೆ ಎಂದು ಹೇಳಿದ್ದ. ಇದಕ್ಕೆ ಸಂಬಂಧಿಸಿದಿ ವಿಡಿಯೋಗಳು ಹರಿದಾಡುತ್ತಿವೆ.
ಖಾಲಿದ್ ಪಾಕಿಸ್ತಾನದಲ್ಲಿರುವ ಎಲ್‌ಇಟಿಯ ಪೇಶಾವರ ಪ್ರಧಾನ ಕಚೇರಿಯ ಮುಖ್ಯಸ್ಥ ಕೂಡ ಆಗಿದ್ದಾನೆ. ಜಮಾತ್-ಉದ್ ದವಾ (ಜೆಯುಡಿ)ನ ಮಧ್ಯ ಪಂಜಾಬ್ ಪ್ರಾಂತ್ಯದ ಸಮನ್ವಯ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾನೆಂದು ವರದಿಯಾಗಿದೆ.
ಮತ್ತೊಂದೆಡೆ ಈ ದಾಳಿಗಳ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಮಾಹಿತಿಯೂ ಇದೆ. ಪಾಕಿಸ್ತಾನ ಸೇನಾ ಮುಖ್ಯಸ್ಥರು ಇತ್ತೀಚೆಗೆ ನೀಡಿರುವ ಹೇಳಿಕೆಗಳು ಇದನ್ನೇ ಆಧರಿಸಿವೆ. ಪಾಕಿಸ್ತಾನ ಎಂದಿಗೂ ಕಾಶ್ಮೀರವನ್ನು ಮರೆಯುವುದಿಲ್ಲ ಮತ್ತು ಕಾಶ್ಮೀರಿಗಳನ್ನು ಒಂಟಿಯಾಗಿ ಬಿಡುವುದಿಲ್ಲ. ಇಸ್ಲಾಮಾಬಾದ್‌ಗೆ, ಕಾಶ್ಮೀರವು ಗಂಟಲಿಗೆ ಹೋಗುವ ರಕ್ತನಾಳದಂತೆ. ನಮ್ಮ ಪೂರ್ವಜರು ಮತ್ತು ನಾವು, ಹಿಂದೂಗಳಿಗಿಂತ ಎಲ್ಲ ರೀತಿಯಲ್ಲೂ ಭಿನ್ನರು ಎಂದು ನಂಬಿದ್ದರು. ನಮ್ಮ ಧರ್ಮವೂ ಭಿನ್ನವಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಈ ಹಿಂದೆ ಹೇಳಿದ್ದ. ಇದಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.
ನಮ್ಮ ಪದ್ಧತಿಗಳು, ಸಂಸ್ಕೃತಿಗಳು, ಆಲೋಚನೆಗಳು ಮತ್ತು ಆಕಾಂಕ್ಷೆಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಅದು ಎರಡು ರಾಷ್ಟ್ರಗಳ ಸಿದ್ಧಾಂತದ ಅಡಿಪಾಯ. ನಾವು ಎರಡು ವಿಭಿನ್ನ ದೇಶಗಳು, ಒಂದೇ ಅಲ್ಲ ಎಂದು ಅವರು ನಂಬಿದ್ದರಿಂದ ಈ ಸಿದ್ಧಾಂತ ಹುಟ್ಟಿಕೊಂಡಿತು. ಅದಕ್ಕಾಗಿಯೇ ನೀವು ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಇತಿಹಾಸವನ್ನು ಮರೆಯಬಾರದು ಎಂದು ಖಂಡಿತವಾಗಿ ಹೇಳಬೇಕು. ನಮ್ಮ ಪೂರ್ವಜರು ಈ ದೇಶವನ್ನು ರೂಪಿಸಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ನಾವೂ ಸಹ ಮಾಡಿದ್ದೇವೆ. ಈ ದೇಶದ ಇತಿಹಾಸವನ್ನು ಮರೆಯಬಾರದು ಎಂದು ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ ಎಂದು ಮುನೀರ್ ಹೇಳಿದ್ದರು. ಹೀಗಾಗಿ ಈ ದಾಳಿಯ ಹಿಂದೆ ಪಾಕ್ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ.
ನಿನ್ನೆ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)