ಉಗ್ರರು ನೆತ್ತರು ಹರಿಸಿದ ಬೈಸರನ್ ಎಲ್ಲಿದೆ?​ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯೋದೇಕೆ? ಅಲ್ಲಿ ಏನೆಲ್ಲಾ ಇದೆ? ಇಲ್ಲಿದೆ ಕಂಪ್ಲೀಟ್​ ಚಿತ್ರಣ... Pahalgam Terror Attack

Pahalgam Terror Attack
Published on

Pahalgam Terror Attack : ಕಣಿವೆ ನಾಡು ಕಾಶ್ಮೀರ ಪ್ರವಾಸಿಗರ ಸ್ವರ್ಗ. ಪ್ರಕೃತಿಯನ್ನೇ ಹೊದ್ದು ಮಲಗಿರುವ ಕಾಶ್ಮೀರದಲ್ಲಿ ಕಣ್ಮನ ಸೆಳೆಯುವ ಸಾಕಷ್ಟು ರಮಣೀಯ ದೃಶ್ಯಗಳಿವೆ. ಹೀಗಾಗಿಯೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದರೆ, ಕಾಶ್ಮೀರಕ್ಕೆ ಇಂದಿಗೂ ಶಾಪವಾಗಿ ಕಾಡುತ್ತಿರುವುದು ಮಾತ್ರ ಕ್ರೂರ ಉಗ್ರರು. ಭಯೋತ್ಪಾದಕರ ನಿರ್ಮೂಲನೆಗೆ ಕೇಂದ್ರ ಸರ್ಕಾರ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರು ಕೂಡ ಆಗಾಗ ದಾಳಿಗಳನ್ನು ನಡೆಸುವ ಮೂಲಕ ಸ್ವರ್ಗದಂತ ಕಾಶ್ಮೀರದಲ್ಲಿ ಭಯ ಹುಟ್ಟು ಹಾಕುತ್ತಿದ್ದಾರೆ. ಇದೀಗ ಮತ್ತೆ ಕಾಶ್ಮೀರದಲ್ಲಿ ನೆತ್ತರು ಹರಿದಿದ್ದು, 28 ಮಂದಿಯ ಜೀವ ಹೋಗಿದೆ. ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಮೈಮರೆತು ಹೋಗಿದ್ದ ಪ್ರವಾಸಿಗರ ಮೇಲೆ ದುಷ್ಟ ಉಗ್ರರು ಗುಂಡಿನ ಮಳೆಗೆರೆದು ಅಟ್ಟಹಾಸ ಮೆರೆದಿದ್ದಾರೆ.

ಈ ಭೀಕರ ದಾಳಿ ಕಾಶ್ಮೀರದ ಪಹಲ್ಗಾಮ್​ನಲ್ಲಿ ದಟ್ಟ ಕಾಡುಗಳಿಂದ ಆವೃತವಾದ ಜನಪ್ರಿಯ ಹುಲ್ಲುಗಾವಲು ಪ್ರದೇಶ ಬೈಸರನ್‌ನಲ್ಲಿ ಮಂಗಳವಾರ ನಡೆದಿದೆ. ನೂರಾರು ಪ್ರವಾಸಿಗರು ಪ್ರಕೃತಿ ಮಾತೆಯ ಮಡಿಲಲ್ಲಿ ಓಡಾಡುತ್ತಿರುವಾಗ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆ ಸ್ಥಳದಲ್ಲಿ ಯಾರೂ ನಿರೀಕ್ಷೆ ಮಾಡದ ಘಟನೆ ನಡೆಯಿತು. ಸೇನಾ ಸಮವಸ್ತ್ರದಲ್ಲಿದ್ದ ನಾಲ್ವರನ್ನೊಳಗೊಂಡ ಭಯೋತ್ಪಾದಕರ ಗುಂಪು ದಟ್ಟ ಕಾಡಿನಿಂದ ಹೊರಬಂದು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗೈದರು. ಈ ಭೀಕರ ದಾಳಿಯಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ ಕನಿಷ್ಠ 26 ಜನರು ಸಾವನ್ನಪ್ಪಿದರು. ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 28 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಭಯೋತ್ಪಾದಕ ದಾಳಿ ಇದಾಗಿದೆ. ಆಘಾತಕಾರಿ ಸಂಗತಿ ಏನೆಂದರೆ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತದ್ದಲ್ಲಿರುವಾಗ ಮತ್ತು ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದಲ್ಲಿ ಇರುವಾಗಲೇ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ದೊಡ್ಡ ಭಯೋತ್ಪಾದಕ ದಾಳಿ ನಡೆದಿದ್ದು 2024, ಜೂನ್ 9ರಂದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನದಂದು ಜಮ್ಮು ಪ್ರದೇಶದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಅಪರಿಚಿತ ಭಯೋತ್ಪಾದಕರು ಗುಂಡು ಹಾರಿಸಿದರು. ಈ ವೇಳೆ ಕನಿಷ್ಠ 10 ಜನರು ಸಾವಿಗೀಡಾಗಿ, 33 ಜನರು ಗಾಯಗೊಂಡರು.

ಈ ಪಹಲ್ಗಾಮ್​ ಯಾವುದಕ್ಕೆ ಪ್ರಸಿದ್ಧ?

ಅಂದಹಾಗೆ ಉಗ್ರರ ದಾಳಿ ನಡೆದ ಪಹಲ್ಗಾಮ್, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ಕಾಶ್ಮೀರ ಕಣಿವೆಯ ದಕ್ಷಿಣ ಭಾಗದಲ್ಲಿದೆ. ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿ ಈ ಪಹಲ್ಗಾಮ್‌ ಗಿರಿಧಾಮವಿದೆ. ಇದು ಲಿಡ್ಡರ್ ನದಿಯ ಉದ್ದಕ್ಕೂ ಇರುವ ಪ್ರಸಿದ್ಧ ಪರ್ವತದ ಹಾದಿಗಳು ಮತ್ತು ದಟ್ಟವಾದ ಕಾಡುಗಳು ಹಾಗೂ ಹಿಂದೂ ಪವಿತ್ರ ದೇವಸ್ಥಾನವಾಗ ಅಮರನಾಥ ಗುಹೆ ದೇವಾಲಯಕ್ಕೆ ನೆಲೆಯಾಗಿದೆ. ಕಂದು ಕರಡಿಗಳು ಮತ್ತು ಕಸ್ತೂರಿ ಜಿಂಕೆಗಳು ಸೇರಿದಂತೆ ಪ್ರಾಣಿಗಳಿಗೆ ನೆಲೆಯಾಗಿರುವ ಅರು ವನ್ಯಜೀವಿ ಅಭಯಾರಣ್ಯ, ಬಾಲಿವುಡ್​ ನಟ ಸನ್ನಿ ಡಿಯೋಲ್ ನಟಿಸಿದ ಚಲನಚಿತ್ರದ ನಂತರ ತನ್ನ ಹೆಸರನ್ನು ಪಡೆದ ಸುಂದರವಾದ ಬೇತಾಬ್ ಕಣಿವೆ ಮತ್ತು ತುಲಿಯನ್ ಸರೋವರ ಪಹಲ್ಗಾಮ್‌ನ ಜನಪ್ರಿಯ ತಾಣಗಳಲ್ಲಿ ಸೇರಿವೆ. ಪಹಲ್ಗಾಮ್‌ನಲ್ಲಿರುವ ಸುಂದರವಾದ ಹುಲ್ಲುಗಾವಲು ಬೈಸರನ್ ಕಣಿವೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮಿನಿ ಸ್ವಿಟ್ಜರ್ಲೆಂಡ್ ಎಂದೇ ಖ್ಯಾತಿ

ಬೈಸರನ್​ ಕಣಿವೆ ತನ್ನ ಪ್ರಾಕೃತಿಕ ಸೌಂದರ್ಯ ಕಾರಣಕ್ಕೆ ಮಿನಿ ಸ್ವಿಟ್ಜರ್ಲೆಂಡ್ ಎಂದೇ ಖ್ಯಾತಿ ಪಡೆದಿದೆ. ಇದು ಪಹಲ್ಗಾಮ್​ನಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಇದು ಆ ಪ್ರದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿಗರ ತಾಣವಾಗಿದೆ. ಜನಪ್ರಿಯ ಚಾರಣ ತಾಣವಾದ ಈ ಹುಲ್ಲುಗಾವಲು ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೂಲಕ ಮಾತ್ರ ತಲುಪಬಹುದು. ಇಲ್ಲಿಗೆ ಯಾವುದೇ ವಾಹನ ಸಂಪರ್ಕವಿಲ್ಲ. ಆದ್ದರಿಂದ ಮಂಗಳವಾರ ಮಧ್ಯಾಹ್ನ ದಾಳಿ ನಡೆದಾಗ ಹತ್ತಿರದಲ್ಲಿ ಯಾವುದೇ ವಾಹನಗಳು ಲಭ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋನಿಗಳ ಮೂಲಕ ಸ್ಥಳೀಯರು ಗಾಯಾಳುಗಳನ್ನು ಕೆಳಗೆ ಕರೆತಂದರು. ರಸ್ತೆ ಸಂಪರ್ಕವಿಲ್ಲದ ಕಾರಣ ಭದ್ರತಾ ಪಡೆಗಳೂ ಘಟನಾ ಸ್ಥಳಕ್ಕೆ ತಲುಪಲು ವಿಳಂಬವಾಯಿತು. ಕಾಲುದಾರಿಯ ಮೂಲಕ ಸೈನಿಕರು ಆಗಮಿಸಿದ, ಕಾರ್ಯಾಚರಣೆ ಆರಂಭಿಸಿದರು. ಹೆಲಿಕಾಪ್ಟರ್​ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಮತ್ತು ಕಣಿವೆಯಲ್ಲಿದ್ದ ಇನ್ನುಳಿದ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಯಿತು.

ಪಹಲ್ಗಾಮ್​ ಅಭಿವೃದ್ಧಿ ಪ್ರಾಧಿಕಾರದ (PDA) ವೆಬ್‌ಸೈಟ್ ಪ್ರಕಾರ, ಬೈಸರನ್ ಅನ್ನು ಯುರೋಪಿಯನ್ ಭೂದೃಶ್ಯವನ್ನೇ ಹೋಲುವ ಒಂದು ಆಕರ್ಷಕ ತಾಣವೆಂದು ಬಣ್ಣಿಸಿದೆ. ಸ್ವಿಟ್ಜರ್ಲೆಂಡ್​ನಲ್ಲಿರುವ ಹುಲ್ಲುಗಾವಲುಗಳನ್ನೇ ಹೋಲುವ ಉದ್ದವಾದ, ಗಾಢವಾದ ಹುಲ್ಲುಗಾವಲುಗಳಿಂದಾಗಿ ಇದನ್ನು ಹೆಚ್ಚಾಗಿ 'ಮಿನಿ ಸ್ವಿಟ್ಜರ್ಲೆಂಡ್' ಎಂದು ಕರೆಯಲಾಗುತ್ತದೆ. ಹುಲ್ಲುಗಾವಲಿಗೆ ಹಸಿರು ಕಾರ್ಪೆಟ್ ನೋಟವನ್ನು ನೀಡುವ ದಟ್ಟವಾದ ಪೈನ್ ಕಾಡು, ಸುತ್ತಮುತ್ತಲಿನ ಪರ್ವತಗಳಲ್ಲಿ ಹಿಮದಿಂದ ಆವೃತವಾದ ಶಿಖರಗಳಿಗೆ ವ್ಯತಿರಿಕ್ತ ಬಣ್ಣವನ್ನು ಸಹ ಒದಗಿಸುತ್ತದೆ ಎಂದು ವೆಬ್‌ಸೈಟ್ ಹೇಳುತ್ತದೆ. ತುಲಿಯನ್ ಸರೋವರದವರೆಗೆ ಮತ್ತಷ್ಟು ಪ್ರಯಾಣಿಸಲು ಬಯಸುವ ಚಾರಣಿಗರಿಗೆ ಬೈಸರನ್ ಸೂಕ್ತ ಶಿಬಿರ ತಾಣವಾಗಿದೆ. ಇದು ಪಟ್ಟಣದ ಮತ್ತು ಲಿಡ್ಡರ್ ಕಣಿವೆಯ ವಿಹಂಗಮ ನೋಟಗಳನ್ನು ನೀಡುತ್ತದೆ. ಲಿಡ್ಡರ್ ನದಿಯ ಸುಂದರ ನೋಟವು ಈ ಸ್ಥಳಕ್ಕೆ ಇನ್ನಷ್ಟು ಆಕರ್ಷಣೆಯನ್ನು ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಈ ತಾಣವು ಬೇಸಿಗೆ ಮತ್ತು ಚಳಿಗಾಲದಲ್ಲಿ ಜನಪ್ರಿಯ ತಾಣವಾಗಿದೆ. ಈ ಕಣಿವೆ ಬೇಸಿಗೆಯಲ್ಲಿ ತಾಜಾ ಪಚ್ಚೆಯಂತೆ ಕಾಣುತ್ತದೆ ಮತ್ತು ಫೋಟೋ ಸೆಸ್ಸನ್​ಗಳಿಗೆ ಸೂಕ್ತವಾಗಿದೆ. ಇನ್ನು ಚಳಿಗಾಲವು ಹಿಮದ ಅದ್ಭುತ ಲೋಕವನ್ನೇ ಸೃಷ್ಟಿಸುತ್ತದೆ ಎಂದು ಇಲಾಖೆ ಹೇಳುತ್ತದೆ.

ಶೂಟಿಂಗ್​ಗೆ ಹೇಳಿ ಮಾಡಿಸಿದ ಸ್ಥಳ

ಬೈಸರನ್​ ತನ್ನ ಪ್ರಾಕೃತಿಕ ಸೊಬಗಿನಿಂದಾಗಿ ಪ್ರವಾಸಿಗರಿಗೆ ಮಾತ್ರವಲ್ಲದೆ, ಸಿನಿಮಾ ತಂಡಗಳಿಗೂ ನೆಚ್ಚಿನ ತಾಣವಾಗಿದೆ. ಇಲ್ಲಿನ ಹುಲ್ಲಿಗಾವಲಿನ ಪ್ರದೇಶ ಮತ್ತು ದಟ್ಟಾರಣ್ಯ ಒಂದು ವಿಹಂಗಮ ನೋಟವನ್ನು ನೀಡಲಿದ್ದು, ಇದನ್ನು ಸೆರೆಹಿಡಿಯಲು ಅನೇಕ ಚಿತ್ರತಂಡಗಳು ಅಲ್ಲಿಗೆ ಆಗಮಿಸುತ್ತದೆ. ಸಾಕಷ್ಟು ಹಾಡಿನ ಚಿತ್ರೀಕರಣಗಳು ನಡೆದಿವೆ. ನಟ ಸಲ್ಮಾನ್​ ಖಾನ್​ ನಟನೆಯ ಸೂಪರ್​ ಹಿಟ್​ ಸಿನಿಮಾ ಭಜರಂಗಿ ಭಾಯಿಜಾನ್ ಸೇರಿದಂತೆ ಹಲವಾರು ಚಲನಚಿತ್ರಗಳ ಚಿತ್ರೀಕರಣದ ಸ್ಥಳವಾಗಿದೆ. ಇನ್ನು ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಕ್ಯಾಮೆರಾವನ್ನು ಆನ್​ ಮಾಡಿದರೆ, ಅಲ್ಲಿಂದ ನಿರ್ಗಮಿಸುವವರೆಗೂ ಅಲ್ಲಿನ ಸೌಂದರ್ಯವನ್ನು ಸೆರೆಹಿಡಿಯುತ್ತಲೇ ಇರುತ್ತಾರೆ. ಒಟ್ಟಾರೆ, ಪ್ರಕೃತಿ ಮಾತೆಯೇ ಹಸಿರು ಸೀರೆಯುಟ್ಟು ಕಂಗೊಳಿಸುವ ಪ್ರದೇಶದಲ್ಲಿ ಇಂದು ನೆತ್ತರು ಹರಿದಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ಈ ಘಟನೆಯಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಆತಂಕದ ಛಾಯೆ ಆವರಿಸಲಿದ್ದು, ಪ್ರವಾಸಿಗರ ಸಂಖ್ಯೆಯೂ ಕುಸಿಯುವ ಸಾಧ್ಯತೆ ಇದೆ.

ಪಹಲ್ಗಾಮ್​ ದಾಳಿ ಹಿನ್ನೆಲೆ

ನಿನ್ನೆ (ಏಪ್ರಿಲ್​ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 28 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಾಳಿ ಉದ್ದೇಶವೇನು?

ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನಾಲ್ಕು ದಿನದ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ವೇಳೆಯಲ್ಲೇ ದೊಡ್ಡ ಮಟ್ಟದ ದಾಳಿ ನಡೆಸುವುದು ಉಗ್ರರ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ. ಇನ್ನು ದಾಳಿ ನಡೆದ ಬೈಸರನ್ ಕಣಿವೆ ಪ್ರದೇಶ ಪ್ರದೇಶ ಪ್ರಮುಖ ಪ್ರವಾಸಿ ಸ್ಥಳವಾಗಿದ್ದು, ಪ್ರವಾಸಿ ಋತು ಆರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಇದೇ ವೇಳೆ ಜುಲೈ 3 ರಿಂದ ಆರಂಭವಾಗಲಿರುವ 38 ದಿನಗಳ ಅಮರನಾಥ ಯಾತ್ರೆಗೆ ಸಿದ್ಧತೆ ನಡೆಯುತ್ತಿದೆ. ಅಮರನಾಥ ಯಾತ್ರೆಯಲ್ಲಿ ಪಹಲ್ಗಾಮ್ ಸಹ ಪ್ರಮುಖ ನೆಲೆಯಾಗಿರುವ ಹಿನ್ನೆಲೆಯಲ್ಲಿ ಉಗ್ರರು ದಾಳಿ ನಡೆಸಲು ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ.

ಪಹಲ್ಗಾಮ್ ಉಗ್ರರ ಗುರಿ ಏಕೆ?

ಪಹಲ್ಗಾಮ್ ಪ್ರಮುಖ ಪ್ರವಾಸಿತಾಣ ಮತ್ತು ಅಮರನಾಥ ಯಾತ್ರೆಯ ಒಂದು ಪ್ರಮುಖ ಬೇಸ್​ಕ್ಯಾಂಪ್. ಈ ಹಿನ್ನೆಲೆಯಲ್ಲಿ ಪಹಲ್ಗಾಮ್ಲ್ಲಿ ಹಲವು ಬಾರಿ ಉಗ್ರರ ದಾಳಿಗಳು ನಡೆದಿವೆ. 2000ನೇ ಇಸವಿಯಲ್ಲಿ ಪಹಲ್ಗಾಮ್ಲ್ಲಿ ಅಮರನಾಥ ಯಾತ್ರೆಯ ಬೇಸ್​ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 30 ಭಕ್ತರು ಬಲಿಯಾಗಿದ್ದರು. 60 ಜನರು ಗಾಯಗೊಂಡಿದ್ದರು. 2001ರಲ್ಲಿ ಶೇಷ್​ನಾಗ್​ನಲ್ಲಿ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿ 13 ಯಾತ್ರಿಕರನ್ನು ಹತ್ಯೆ ಮಾಡಿದ್ದರು. 2002ರಲ್ಲಿ ಪಹಲ್ಗಾಮ್ ಪ್ರದೇಶದಲ್ಲಿ 11 ಜನರನ್ನು ಉಗ್ರರು ಹತ್ಯೆ ಮಾಡಿದ್ದರು. 2017ರಲ್ಲಿ ಅಮರನಾಥ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದವರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 8 ಜನರು ಪ್ರಾಣ ಕಳೆದುಕೊಂಡರು. ಕಳೆದ ವರ್ಷ ಪಹಲ್ಗಾಮ್ ಯನ್ನರ್​ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ರಾಜಸ್ಥಾನದ ದಂಪತಿ ಗಾಯಗೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net