

Danish Kaneria : ಪ್ರವಾಸಿಗರ ಸ್ವರ್ಗ ಕಾಶ್ಮೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಹೃದಯವೇ ಇಲ್ಲದ ಧರ್ಮಾಂದ ಉಗ್ರರು, ಕಣಿವೆ ನಾಡಿನ ಸೌಂದರ್ಯ ಸವಿಯಲು ಆಗಮಿಸಿದ್ದ ಪ್ರವಾಸಿಗರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಅದರಲ್ಲೂ ಹೆಸರು ಮತ್ತು ಧರ್ಮವನ್ನು ಕೇಳಿ ಗುಂಡು ಹಾರಿಸಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.
ನಿನ್ನೆ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 28 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕ್ ಪರ ಆಡಿದ ಕೆಲವೇ ಹಿಂದೂ ಕ್ರಿಕೆಟಿಗರಲ್ಲಿ ಒಬ್ಬರಾದ ಡ್ಯಾನಿಶ್ ಕನೇರಿಯಾ ಭಯೋತ್ಪಾದಕ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪಹಲ್ಗಾಮ್ ದಾಳಿಯನ್ನು "ಅನಾಗರಿಕ ದಾಳಿ" ಎಂದು ಖಂಡಿಸಿದ್ದಾರೆ.
ಬಾಂಗ್ಲಾದೇಶದಿಂದ ಬಂಗಾಳ ಮತ್ತು ಕಾಶ್ಮೀರದವರೆಗೆ ಹಿಂದುಗಳನ್ನು ಟಾರ್ಗೆಟ್ ಮಾಡುವ ಅದೇ ಮನಸ್ಥಿತಿ ಇದೆ. ಆದರೆ, ಈ ಜಾತ್ಯತೀತರು ಮತ್ತು ನ್ಯಾಯಾಂಗವು ದಾಳಿಕೋರರನ್ನು ದಮನಿತ ಅಲ್ಪಸಂಖ್ಯಾತರೆಂದು ಬ್ರಾಂಡ್ ಮಾಡುತ್ತಿದೆ ಎಂದು ಕನೇರಿಯಾ ಅವರು ಟ್ವೀಟ್ ಮಾಡಿದ್ದಾರೆ.
ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದಿರುವ ಕನೇರಿಯಾ, ಪತಿಯನ್ನು ಕಳೆದುಕೊಂಡು, ಮೃತದೇಹದ ಪಕ್ಕದಲ್ಲಿ ಮೌನವಾಗಿ ಕುಳಿತಿರುವ ಮಹಿಳೆಯ ಫೋಟೋವನ್ನು, ಕನೇರಿಯಾ ಅವರು ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದಾದ್ಯಂತ ಹಿಂದೂಗಳ ಮೇಲೆ ದಾಳಿಗಳು ನಡೆದಿವೆ. ಹಿಂದೂ ಆಸ್ತಿಗಳು, ದೇವಾಲಯಗಳು ಮತ್ತು ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಅನೇಕ ಸ್ಥಳಗಳಲ್ಲಿ ಮಹಿಳೆಯರನ್ನು ಸಹ ಅಪಹರಿಸಲಾಯಿತು. ಬಂಗಾಳದ ಮುರ್ಷಿದಾಬಾದ್ನಲ್ಲಿ ಮುಸ್ಲಿಮರು ವಕ್ಫ್ ಕಾಯ್ದೆಯ ವಿರುದ್ಧ ಹಿಂಸಾತ್ಮಕ ದಾಳಿಗಳನ್ನು ನಡೆಸಿದರು. ಈ ದಾಳಿಗಳಲ್ಲಿಯೂ ಹಿಂದೂ ಆಸ್ತಿಗಳು ಮತ್ತು ಹಿಂದೂಗಳನ್ನು ಗುರಿಯಾಗಿಸಲಾಗಿತ್ತು. ಈ ದಾಳಿಗಳಿಂದಾಗಿ ಹಿಂದೂಗಳು ಮುರ್ಷಿದಾಬಾದ್ನಿಂದ ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದರು. ಇತ್ತೀಚೆಗೆ, ಡ್ಯಾನಿಶ್ ಕನೇರಿಯಾ ತಮ್ಮ ಪೋಸ್ಟ್ನಲ್ಲಿ ಈ ಬಗ್ಗೆ ಬರೆದು, ತೀವ್ರಗಾಮಿ ಇಸ್ಲಾಮಿಸ್ಟ್ಗಳ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ್ದರು. (ಏಜೆನ್ಸೀಸ್)