

ಜೈಪುರ: ಐಪಿಎಲ್ನಲ್ಲಿ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಸೋತು ಪರದಾಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ಮ್ಯಾಚ್ ಫಿಕ್ಸಿಂಗ್ ಮಾಡಿ ಪಂದ್ಯಗಳನ್ನು ಸೋಲುತ್ತಿದೆ ಎಂದು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ (ಆರ್ಸಿಎ) ಆಡ್ಹಾಕ್ ಸಮಿತಿಯ ಸಂಚಾಲಕ ಜೈದೀಪ್ ಬಿಹಾನಿ ಆರೋಪಿಸಿದ್ದಾರೆ. ಲಖನೌ ವಿರುದ್ಧದ ಪಂದ್ಯದಲ್ಲಿ ಆರ್ಆರ್ ತಂಡ ಕೊನೇ ಓವರ್ನಲ್ಲಿ 9 ರನ್ ಬೆನ್ನಟ್ಟಲಾಗದೆ 2 ರನ್ಗಳಿಂದ ಸೋಲು ಅನುಭವಿಸಿರುವುದನ್ನು ಉಲ್ಲೇಖಿಸಿ ಅವರು ಈ ಆರೋಪ ಮಾಡಿದ್ದಾರೆ.
ರಾಜಸ್ಥಾನದ ಬಿಜೆಪಿ ಶಾಸಕರೂ ಆಗಿರುವ ಜೈದೀಪ್, "ಲಖನೌ ವಿರುದ್ಧದ ಪಂದ್ಯ ಫಿಕ್ಸ್ ಆಗಿತ್ತು ಎಂದು ಮಗು ಕೂಡ ಹೇಳಬಲ್ಲುದು. ತವರು ಮೈದಾನದಲ್ಲಿ ಕೊನೇ ಓವರ್ನಲ್ಲಿ ಅಷ್ಟು ಕಡಿಮೆ ರನ್ಗಳನ್ನು ಗಳಿಸಲಾಗದೆ ಅವರು ಹೇಗೆ ಸೋಲುತ್ತಾರೆ' ಎಂದು ಹೇಳಿದ್ದಾರೆ. ಅಲ್ಲದೆ ಆರ್ಆರ್ ತಂಡದ ಮ್ಯಾನೇಜ್ಮೆಂಟ್ನಲ್ಲಿ ಆರ್ಸಿಎಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ದೂರಿದ್ದಾರೆ.
ಆರ್ಸಿಎ ಆಡ್ಹಾಕ್ ಸಮಿತಿ ಸದಸ್ಯರಿಗೆ ಐಪಿಎಲ್ ಪಂದ್ಯಗಳ ವೇಳೆ ಸ್ಟೇಡಿಯಂ ಪ್ರವೇಶಕ್ಕೆ ಮಾನ್ಯತೆ ಕಾರ್ಡ್ಗಳನ್ನು ನೀಡದಿರುವುದು ಜೈದೀಪ್ ಸಿಟ್ಟಿಗೆ ಪ್ರಮುಖ ಕಾರಣವಾಗಿದೆ. ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನ ಒಡೆತನ, ಐಪಿಎಲ್ ವೇಳೆ ಆರ್ಸಿಎಗೆ ಬದಲಾಗಿ ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ಗೆ ಒಳಪಟ್ಟಿರುತ್ತದೆ.
ಫ್ರಾಂಚೈಸಿಯಿಂದ ಸಿಎಂಗೆ ದೂರು
ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿರುವ ಜೈದೀಪ್ ಬಿಹಾನಿ ವಿರುದ್ಧ ರಾಜಸ್ಥಾನ ಫ್ರಾಂಚೈಸಿ ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಗೆ ದೂರು ಸಲ್ಲಿಸಿದೆ. ಜತೆಗೆ ಇದೊಂದು ಸುಳ್ಳು, ನಿರಾಧಾರ ಮತ್ತು ಸಾಕ್ಷ$್ಯ ರಹಿತವಾದ ಆರೋಪವಾಗಿದೆ ಎಂದು ತಿಳಿಸಿದೆ. ರಾಜಸ್ಥಾನದ ಕ್ರೀಡಾ ಸಚಿವ ಮತ್ತು ಕ್ರೀಡಾ ಕಾರ್ಯದರ್ಶಿಗೂ ದೂರು ನೀಡಲಾಗಿದ್ದು, ಜೈದೀಪ್ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ.
*ನಾವು ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತೇವೆ. ಇಂಥ ಸಾರ್ವಜನಿಕ ಹೇಳಿಕೆಗಳಿಂದ ರಾಜಸ್ಥಾನ ರಾಯಲ್ಸ್ ಮಾತ್ರವಲ್ಲದೆ ಬಿಸಿಸಿಐನ ವರ್ಚಸ್ಸಿಗೂ ಗಂಭೀರ ಹೊಡೆತ ಬೀಳುತ್ತದೆ. ಕ್ರಿಕೆಟ್ ವಿಶ್ವಾಸಾರ್ಹತೆಯನ್ನೂ ಹಾಳು ಮಾಡುತ್ತದೆ.
| ಅಧಿಕಾರಿ, ರಾಜಸ್ಥಾನ ರಾಯಲ್ಸ್